ಎಲ್ಟಿಟಿಇ ನಾಯಕ ಪ್ರಭಾಕರನ್ ಪುತ್ರನಿಗೆ ತಿಂಡಿಕೊಟ್ರು, ಆಮೇಲೆ ಸಾಯಿಸಿದ್ರು...
ಶ್ರೀಲಂಕಾದ ಎಲ್ಟಿಟಿಇ ನಾಯಕ ಪ್ರಭಾಕರನ್ ಅವರ 12ರ ಹರೆಯದ ಪುತ್ರನಿಗೆ ಶ್ರೀಲಂಕಾದ...
ಲಂಡನ್: ಶ್ರೀಲಂಕಾದ ಎಲ್ಟಿಟಿಇ ನಾಯಕ ಪ್ರಭಾಕರನ್ ಅವರ 12ರ ಹರೆಯದ ಪುತ್ರನಿಗೆ ಶ್ರೀಲಂಕಾದ ಸೇನಾಪಡೆ ಮೊದಲು ತಿಂಡಿಕೊಟ್ಟು ಆಮೇಲೆ ಗುಂಡಿಕ್ಕಿ ಸಾಯಿಸಿದೆ ಎಂಬ ಸುದ್ದಿ ಇದೀಗ ಚರ್ಚೆಗಾಸ್ಪದವಾಗಿದೆ. ಅಂದರೆ ಪ್ರಭಾಕರನ್ ಪುತ್ರ ಗುಂಡಿನ ದಾಳಿಗೆ ಬಲಿಯಾಗಿರಲಿಲ್ಲ, ಬದಲಾಗಿ ಆತನನ್ನು ಉಪಾಯದಿಂದ ಸೆರೆಹಿಡಿದು, ಹತ್ಯೆಗೈಯ್ಯಲಾಗಿತ್ತು ಎಂಬುದನ್ನು ಸಾಕ್ಷ್ಯಚಿತ್ರವೊಂದು ಬಹಿರಂಗ ಪಡಿಸಿದೆ.
ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಲಂ (ಎಲ್ಟಿಟಿಇ) ಮುಖ್ಯಸ್ಥ ವಿಲ್ಲುಪಿಳ್ಳೈ ಪ್ರಭಾಕರನ್ ಅವರ ಪುತ್ರ ಬಾಲಚಂದ್ರನ್ ಪ್ರಭಾಕರನ್ ಅವರ ಸಾವಿನ ಮುನ್ನ ತೆಗೆದ ಕೆಲವು ಫೋಟೋಗಳಿಂದ ಈ ಸತ್ಯ ಬಹಿರಂಗವಾಗಿದೆ.
ಪ್ರಸ್ತುತ ಫೋಟೋದಲ್ಲಿ ಶ್ರೀಲಂಕಾ ಪಡೆಯ ಕಸ್ಟಡಿಯಲ್ಲಿದ್ದ ಬಾಲಚಂದ್ರನ್ ಏನೂ ಗಾಯವಾಗದೆ ಬಂಕರ್ ಪಕ್ಕ ಕುಳಿತಿದ್ದಾನೆ. ಇದಾದ ನಂತರ ಸ್ವಲ್ಪ ಸಮಯ ಕಳೆದು ತೆಗೆದ ಫೋಟೋದಲ್ಲಿ ಆತನ ಎದೆಯನ್ನು ಗುಂಡು ಸೀಳಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಚಿತ್ರವಿದೆ. ಈ ಎಲ್ಲ ಫೋಟೋಗಳನ್ನು 2009 ಮೇ ತಿಂಗಳಲ್ಲಿ ತೆಗೆಯಲಾಗಿತ್ತು.
2009ರಲ್ಲಿ ಶ್ರೀಲಂಕಾ ಸರ್ಕಾರ ಮತ್ತು ಎಲ್ಟಿಟಿಇ ನಡುವಿನ ಗುಂಡಿನ ದಾಳಿ ನಡೆದಿದ್ದು ಅದರಲ್ಲಿ ಈ ಹುಡುಗನ ಹತ್ಯೆ ಮಾಡಲಾಗಿತ್ತು.
ಆದಾಗ್ಯೂ, ದಾಳಿ ನಡೆಯುವಾಗ ಪ್ರಭಾಕರನ್ನ ಪುತ್ರ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ ಎಂದು ಸೇನೆ ಹೇಳಿಕೆ ನೀಡಿತ್ತು.
ಆದರೆ ಫೋಟೋಗಳನ್ನು ಗಮನಿಸಿದರೆ, ಪ್ರಭಾಕರನ್ರ ಪುತ್ರರನ್ನು ಉಪಾಯವಾಗಿ ಸೆರೆಹಿಡಿದು, ತದನಂತರ ಸಮೀಪದಿಂದ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿದೆ ಎಂಬ ಅಂಶ ತಿಳಿದುಬರುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
No Fire Zone, ಎಂಬ ಸಾಕ್ಷ್ಯಚಿತ್ರವೊಂದರಲ್ಲಿ ಈ ಫೋಟೋಗಳನ್ನು ಬಳಸಲಾಗಿದ್ದು, ಈ ಸಾಕ್ಷ್ಯಚಿತ್ರವನ್ನು ಜೆನಿವಾ ಮಾನವ ಹಕ್ಕು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು.
ಈ ಫೋಟೋಗಳವನ್ನು ಪರಿಶೀಲಿಸಿದ ಫಾರೆನ್ಸಿಕ್ ಪಾಥೋಲಜಿಸ್ಟ್, ಪ್ರಭಾಕರನ್ರ ಪುತ್ರನ ಎದೆಗೆ 5 ಬಾರಿ ಗುಂಡು ಹಾರಿಸಲಾಗಿದೆ ಎಂದಿದ್ದಾರೆ.
ಮಾತ್ರವಲ್ಲದೆ, ಆತನ ದೇಹದ ಮೇಲಿನ ಗಾಯಗಳನ್ನು ಗಮನಿಸಿದರೆ, ಆತನಿಗೆ ಹತ್ತಿರದಿಂದಲೇ ಗುಂಡು ಹಾರಿಸಲಾಗಿತ್ತು ಎಂಬುದು ತಿಳಿದುಬರುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಫೋಟೋಗಳು ಪ್ರಭಾಕರನ್ ಪುತ್ರ ಗುಂಡಿನ ದಾಳಿಗೆ ಬಲಿಯಾಗಿದ್ದಲ್ಲ, ಆತನನ್ನು ಸೇನೆ ಸಾಯಿಸಿದೆ ಎಂಬುದಕ್ಕೆ ಪ್ರಧಾನ ಸಾಕ್ಷಿ ಎಂದು ಸಾಕ್ಷ್ಯಚಿತ್ರದ ನಿರ್ದೇಶಕ ಕಾಲ್ಲುಂಮಾಕ್ರೆ ಅಭಿಪ್ರಾಯ ಪಟ್ಟಿದ್ದಾರೆ.