ಜಮ್ಮು ಭೇಟಿ: ವಿಮಾನ ನಿಲ್ದಾಣದಲ್ಲೇ ತಡೆ; ತೊಗಾಡಿಯಾ ವಾಪಸ್
ಜಮ್ಮು: ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದೆಂಬ ಕಾರಣದಿಂದ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ನಾಯಕ ಪ್ರವೀಣ್ ತೊಗಾಡಿಯಾ ಅವರನ್ನು ಗುರುವಾರ ಜಮ್ಮು ವಿಮಾನ ನಿಲ್ದಾಣದಲ್ಲಿ ತಡೆದು ವಾಪಸ್ ಕಳುಹಿಸಿದ ಘಟನೆ ಜರುಗಿದೆ.
ತೊಗಾಡಿಯಾ ಅವರು ನಗರಕ್ಕೆ ಆಗಮಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂಭವವಿರುವುದರಿಂದ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದು ವಾಪಸ್ ಕಳುಹಿಸಲಾಯಿತು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಂಜೀವ್ ವರ್ಮಾ ತಿಳಿಸಿದ್ದಾರೆ.
ಪೊಲೀಸರು ನನ್ನನ್ನು ಜಮ್ಮು ವಿಮಾನ ನಿಲ್ದಾಣದಲ್ಲಿ ತಡೆದು ಹೊರಗೆ ಹೋಗದಂತೆ ತಡೆದು ವಾಪಸ್ ಹಿಂದಿರುಗುವಂತೆ ಮಾಡಿದ್ದಾರೆ. ಆದರೆ ಅವರು ಒಬ್ಬ ಭಾರತೀಯ ಪ್ರಜೆಯ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡರು ಎಂದು ತೊಗಾಡಿಯಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತೊಗಾಡಿಯಾ, ಈ ಹಿಂದೆಯೇ ನಾನು ಜಮ್ಮುವಿಗೆ ಬರುವುದಾಗಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರದ ಮೂಲಕ ತಿಳಿಸಿದ್ದೇನೆ. ಆದರೆ ನಗರದಲ್ಲಿ ಕಾನೂನು ಸುವ್ಯಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ಜಮ್ಮು ಪ್ರವೇಶಿಸಲು ಬಿಡುತ್ತಿಲ್ಲ ಎಂದು ಹೇಳಿದರು. ಭಾರತದ ಯಾವುದೇ ರಾಜ್ಯಕ್ಕೆ ತಾವು ಭೇಟಿ ನೀಡಿದರು ಅಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದ ಉದಾಹರಣೆಗಳಿಲ್ಲ, ಅಂತಹದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆಯೇ ಎಂದು ಪರೋಕ್ಷವಾಗಿ ಅಲ್ಲಿನ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ನಾನು ಎರಡು ದಿನಗಳ ಭೇಟಿಗಾಗಿ ಬಂದಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳಿಗೆ ಉದ್ಯೋಗ, ಶಿಕ್ಷಣ, ಭದ್ರತೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ದೂರು ನೀಡಲು ಬಂದಿರುವುದಾಗಿ ತೊಗಾಡಿಯಾ ತಿಳಿಸಿದ್ದಾರೆ.
ತಮ್ಮ ನಾಯಕನನ್ನು ವಿಮಾನ ನಿಲ್ದಾಣದಲ್ಲಿ ತಡೆದು, ಭೇಟಿಯಾಗಲು ಪೊಲೀಸ್ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ವಿಹೆಚ್‌ಪಿ ಮತ್ತು ಭಜರಂಗ ದಳದ ಕಾರ್ಯಕರ್ತರು ವಿಮಾನ ನಿಲ್ದಾಣದ ಮುಂದೆ ಪ್ರತಿಭಟಿಸಿದ್ದಾರೆ.