ಸಚಿವ ಸ್ಥಾನಕ್ಕೆ ಯೋಗೇಶ್ವರ್, ರಾಜುಗೌಡ ರಾಜಿನಾಮೆ
ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ಬಿಜೆಪಿ ಸರ್ಕಾರದ ಇಬ್ಬರು ಸಚಿವರು ರಾಜಿನಾಮೆ ನೀಡಿದ್ದಾರೆ..
ಬೆಂಗಳೂರು: ಆಡಳಿತರೂಢ ಬಿಜೆಪಿಯಲ್ಲಿ ರಾಜಿನಾಮೆ ಪರ್ವ ಆರಂಭಗೊಂಡಿದ್ದು, ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ಬಿಜೆಪಿ ಸರ್ಕಾರದ ಇಬ್ಬರು ಸಚಿವರು ಬುಧವಾರ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸಣ್ಣ ಕೈಗಾರಿಕೆ ಸಚಿವ ರಾಜುಗೌಡ(ನರಸಿಂಹ ನಾಯಕ) ಹಾಗೂ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಅವರು ಇಂದು ಮಧ್ಯಾಹ್ನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ತಮ್ಮ ಸಚಿವ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ ಅವರು, ಈವರೆಗೆ ನಾವು ರಾಜ್ಯಪಾಲರ ಕೈಕೆಳಗೆ ಮಂತ್ರಿಗಳಾಗಿ ಕೆಲಸ ಮಾಡಿದ್ದೇವೆ. ಈಗ ರಾಜಿನಾಮೆ ನೀಡುತ್ತಿರುವುದನ್ನು ಅವರ ಗಮನಕ್ಕೆ ತರುವುದು ನಮ್ಮ ಕರ್ತವ್ಯ ಮತ್ತು ಸಚಿವರಾಗಿ ಕೆಲಸ ಮಾಡಲು ಅವಕಾಶ ಮಾಡಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲು ತಾವು ರಾಜಭವನಕ್ಕೆ ಆಗಮಿಸಿದ್ದಾಗಿ ತಿಳಿಸಿದರು.
ರಾಜ್ಯಪಾಲರೊಂದಿಗಿನ ಸೌಜನ್ಯದ ಭೇಟಿಯ ನಂತರ ಇಬ್ಬರು ಸಚಿವರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಮೊದಲು ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ನಂತರ ಮಡಿಕೇರಿಗೆ ತೆರಳಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಭೇಟಿ ಮಾಡಿ ತಮ್ಮ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವುದಾಗಿ ರಾಜುಗೌಡ ಹೇಳಿದ್ದಾರೆ.