ಪುಣೆ ಸ್ಫೋಟ ಆರೋಪಿ ಹೈದ್ರಾಬಾದ್ನಲ್ಲಿ ಬೇಹುಗಾರಿಕೆ ನಡೆಸಿದ್ದ!
ಪುಣೆ ಸ್ಫೋಟದಲ್ಲಿ ಭಾಗಿಯಾಗಿ ಕಳೆದ ವರ್ಷ ದೆಹಲಿ ಪೊಲೀಸರಿಂದ ಬಂಧಿತರಾಗಿದ್ದ ಇಂಡಿಯನ್ ಮುಜಾಹಿದ್ದೀನ್...
ನವದೆಹಲಿ: ಪುಣೆ ಸ್ಫೋಟದಲ್ಲಿ ಭಾಗಿಯಾಗಿ ಕಳೆದ ವರ್ಷ ದೆಹಲಿ ಪೊಲೀಸರಿಂದ ಬಂಧಿತರಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರಿಬ್ಬರು ಹೈದ್ರಾಬಾದ್ನ ದಿಲ್ಸುಖ್ ನಗರದಲ್ಲಿ ಬೇಹುಗಾರಿಕೆ ನಡೆಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ನಾಂದೆದ್ ಜಿಲ್ಲೆಯವರಾದ ಸಯೀದ್ ಮಕ್ಬೂಲ್ ಮತ್ತು ಇಮ್ರಾನ್ ಖಾನ್ ಬಂಧಿತ ಆರೋಪಿಗಳಾಗಿದ್ದು, ಪೊಲೀಸ್ ವಿಚಾರಣೆಯ ವೇಳೆ ಸತ್ಯ ಬಹಿರಂಗ ಪಡಿಸಿದ್ದಾರೆ.
ಈ ಇಬ್ಬರು ವ್ಯಕ್ತಿಗಳನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಂಧಿಸಲಾಗಿತ್ತು. ಇವರು ಜುಲೈ 2012ರಲ್ಲಿ ಹೈದ್ರಾಬಾದ್ನ ದಿಲ್ಸುಖ್ನಗರ್, ಬೇಗಂ ಬಜಾರ್ ಮತ್ತು ಅಬಿಡ್ಸ್ನಲ್ಲಿ ಬೇಹುಗಾರಿಕೆ ನಡೆಸಿದ್ದರೆಂದು ವಿಚಾರಣೆಯ ವೇಳೆ ಹೇಳಿರವುದಾಗಿ ಪೊಲೀಸರು ಹೇಳಿದ್ದಾರೆ.
ಅಕ್ಟೋಬರ್ 23ರಂದು ಮಕ್ಬೂಲ್ನ್ನು ಹೈದ್ರಾಬಾದ್ನಿಂದಲೇ ಬಂಧಿಸಲಾಗಿತ್ತು.
ಈ ವೇಳೆ ಬಿಹಾರದ ಬೌದ್ಧ ಮಂದಿರವಾದ ಬೋಧ್ಗಯಾದಲ್ಲಿ ಉಗ್ರ ಕೃತ್ಯ ನಡೆಸಲು ಮಕ್ಬೂಲ್ ತಂತ್ರ ರೂಪಿಸಿದ್ದನು ಎಂದು ಹೇಳಲಾಗುತ್ತಿದೆ.
2012 ರಮ್ಜಾನ್ ಹಬ್ಬಕ್ಕೆ ಒಂದು ತಿಂಗಳಿಗೆ ಮುನ್ನ ಮಕ್ಬೂಲ್ ಮೊಟಾರ್ ಸೈಕಲ್ನಲ್ಲಿ ಹೈದ್ರಾಬಾದ್ನ ದಿಲ್ಸುಖ್ನಗರ್, ಬೇಗಂ ಬಜಾರ್ ಮತ್ತು ಅಬಿಡ್ಸ್ನಲ್ಲಿ ಬೇಹುಗಾರಿಕೆ ನಡೆಸಲು ಇಮ್ರಾನ್ಗೆ ಸಹಾಯ ಮಾಡಿದ್ದನು. ಈ ಎಲ್ಲಾ ಕಾರ್ಯಗಳು ರಿಯಾಜ್ ಭಟ್ಕಳ್ನ ಆದೇಶದ ಮೇರೆಗೆ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಆದಾಗ್ಯೂ, ಹೈದ್ರಾಬಾದ್ ಸ್ಫೋಟದ ತನಿಖೆಗೆ ಆಂಧ್ರಪ್ರದೇಶದ ಪೊಲೀಸರಿಗೆ ಸಹಾಯ ನೀಡಲು ದೆಹಲಿ ಪೊಲೀಸರ ತಂಡ ಹೈದ್ರಾಬಾದ್ಗೆ ಆಗಮಿಸಿದೆ.