2 ಸಲ ಸ್ಫೋಟಕ್ಕೆ ಸಿಲುಕಿ ಬಚಾವಾದ ಮಿರ್ಜಾ ವಿಚಾರಣೆ
ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎರಡು ಬಾರಿ ಬಾಂಬ್ ಸ್ಫೋಟಕ್ಕೆ ಸಿಕ್ಕಿ ಬಜಾವಾದ 23 ವರ್ಷದ ಅಬ್ಬುಲ್ ವಾಸಿಫ್ ..
ಹೈದರಾಬಾದ್: ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎರಡು ಬಾರಿ ಬಾಂಬ್ ಸ್ಫೋಟಕ್ಕೆ ಸಿಕ್ಕಿ ಬಜಾವಾದ 23 ವರ್ಷದ ಅಬ್ಬುಲ್ ವಾಸಿಫ್ ಮಿರ್ಜಾನನ್ನು ಹೈದರಾಬಾದ್ ಪೊಲೀಸರು ಶನಿವಾರ ವಿಚಾರಣೆಗೆ ಒಳಪಡಿಸಿದ್ದಾರೆ.
ಗುರುವಾರ ದಿಲ್ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಿರ್ಜಾನನ್ನು ತನಿಖೆಯ ಭಾಗವಾಗಿ ನಾವು ವಿಚಾರಣೆಗೆ ಒಳಪಡಿಸಿದ್ದೇವೆ ಮತ್ತು ಸಾಕ್ಷಿಯಾಗಿ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿರುವುದಾಗಿ ಹೈದರಾಬಾದ್ ಪೊಲೀಸ್ ಆಯುಕ್ತ ಅನುರಾಗ್ ಶರ್ಮಾ ಅವರು ಹೇಳಿದ್ದಾರೆ.
ಪ್ರಕರಣದಲ್ಲಿ ಮಿರ್ಜಾ ಅವರನ್ನು ಶಂಕಿತ ಎಂದು ಪರಿಗಣಿಸುತ್ತಿರಾ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಇಲ್ಲ ಆ ರೀತಿ ಪರಿಗಣಿಸುವುದಿಲ್ಲ. ಸಾಕ್ಷಿಯಾಗಿ ಪರಿಗಣಿಸಲಾಗುವುದು ಎಂದು ಉತ್ತರಿಸಿದರು.
ಅವಳಿ ಬಾಂಬ್ ಸ್ಫೋಟದಲ್ಲಿ ಮಿರ್ಜಾ ಕೈವಾಡ ಇರುವ ಸಾಧ್ಯತೆ ಇದ್ದು, ಆತನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಈ ಮುಂಚೆ ಮಾಧ್ಯಮಗಳು ವರದಿ ಮಾಡಿದ್ದವು. 2007ರ ಮೆಕ್ಕಾ ಮಸೀದಿ ಸ್ಫೋಟದಲ್ಲಿ ಕಾಲು ಕಳೆದುಕೊಂಡಿದ್ದ ಮಿರ್ಚಾ, ಗುರುವಾರ ಸಂಭವಿಸಿದ್ದ ಅವಳಿ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಯಶೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.