ಭಯೋತ್ಪಾದನೆ ವಿಷಯದಲ್ಲಿ ರಾಜಕಾರಣ ಸಲ್ಲ: ಬಿಜೆಪಿ
ಭಯೋತ್ಪಾದನೆಯ ವಿಷಯದಲ್ಲಿ ರಾಜಕೀಯ ಪಕ್ಷಗಳು ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ...
ನವದೆಹಲಿ: ಭಯೋತ್ಪಾದನೆಯ ವಿಷಯದಲ್ಲಿ ರಾಜಕೀಯ ಪಕ್ಷಗಳು ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಹೇಳಿದೆ.
ಹೈದ್ರಾಬಾದ್ ಸ್ಫೋಟದಲ್ಲಿ ಹಲವಾರು ಮುಗ್ಧ ಜನರು ಸಾವನ್ನಪ್ಪಿದ್ದಾರೆ. ಭಯೋತ್ಪಾದನೆಯ ವಿಷಯದಲ್ಲಿ ಸರ್ಕಾರ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಈ ಕೃತ್ಯಗಳ ಬಗ್ಗೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ. ಮಾತ್ರವಲ್ಲದೆ ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಉತ್ತಮ ಸಹಭಾಗಿತ್ವವಿರಬೇಕು ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಬದಲು ಇಂತಹ ಕೃತ್ಯಗಳನ್ನು ತಡೆಯಲು ಜಂಟಿಯಾಗಿ ಕ್ರಮ ಕೈಗೊಳ್ಳಬೇಕು.
ಭಯೋತ್ಪಾದನೆಯ ವಿರುದ್ಧ ಹೋರಾಡಲು ತಾವು ಎಲ್ಲ ರೀತಿಯ ಬೆಂಬಲ ನೀಡುತ್ತೇವೆ ಎಂದು ಹೇಳಿದ ಬಿಜೆಪಿ, ಉಗ್ರರ ಕೃತ್ಯಗಳನ್ನು ತಡೆಯಲು ಸರ್ಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದೆ.
ಕೇಂದ್ರ ಸರ್ಕಾರ ಮತ ಬ್ಯಾಂಕ್ ವಿಚಾರ ಬದಿಗಿಟ್ಟು, ಯಥಾರ್ಥ ಪರಿಸ್ಥಿತಿಯ ಬಗ್ಗೆ ಚಿಂತಿಸಬೇಕಾಗಿದೆ. ಅದೇ ವೇಳೆ ದಿನ ಕಳೆಯುತ್ತಿದ್ದಂತೆ ಶಿಂದೆ ಅವರು ಅಸಮರ್ಥ ಗೃಹ ಸಚಿವರಾಗುತ್ತಿದ್ದಾರೆ ಎಂದು ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.