ಹೈ ಸ್ಫೋಟ ಪ್ರಕರಣದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ: ಪೊಲೀಸ್ ವರಿಷ್ಠಾಧಿಕಾರಿ
ದಿಲ್ಸುಖ್ನಗರದಲ್ಲಿ ಗುರುವಾರ ಸಂಭವಿದ ಅವಳಿ ಬಾಂಬ್ ಸ್ಫೋಟದ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ...
ಹೈದ್ರಾಬಾದ್: ದಿಲ್ಸುಖ್ನಗರದಲ್ಲಿ ಗುರುವಾರ ಸಂಭವಿದ ಅವಳಿ ಬಾಂಬ್ ಸ್ಫೋಟದ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಹೈದ್ರಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಶರ್ಮಾ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಶರ್ಮಾ, ಶೀಘ್ರವೇ ಈ ಪ್ರಕರಣವವನ್ನು ಬೇಧಿಸಲಾಗುವುದು ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶರ್ಮಾ ಹೇಳಿದ ಮಾತಿನ ಸಾರ ಇಲ್ಲಿದೆ:
- ಪ್ರಕರಣದ ಬಗ್ಗೆ ತನಿಖೆ ನಡೆಸಲು ನಾವು 6 ವಿಶೇಷ ತಂಡಗಳನ್ನು ರಚಿಸಿದ್ದೇವೆ. ನಾವು ಈಗಾಗಲೇ ಸಾಕ್ಷ್ಯಗಳನ್ನು ಸಂಗ್ರಹಿಸ ತೊಡಗಿದ್ದು, ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದೇವೆ.
- ಇನ್ಮುಂದೆ ಇಂಥಾ ಕೃತ್ಯಗಳು ನಡೆಯದಂತೆ ತಡೆಯಲು ನಾವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
- ಸಿನಿಮಾ ಹಾಲ್, ಮಾಲ್ಗಳಂತಹ ಜನ ನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ
- ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆ ಯಾರಾದರೂ ನಮಗೆ ಮಾಹಿತಿ ನೀಡಿದರೆ ಅವರಿಗೆ ರು.10 ಲಕ್ಷ ಬಹುಮಾನ ನೀಡಬೇಕೆಂದು ನಾನು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ.
- ನಾವು ತಪ್ಪಿತಸ್ಥರನ್ನು ಸೆರೆ ಹಿಡಿಯುತ್ತೇವೆ.
- ಟ್ರಾಫಿಕ್ ನಿರ್ವಹಣೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಇರಿಸಲಾಗಿದ್ದು, ದಿಲ್ಸುಖ್ನಗರದಲ್ಲಿರುವ ಸಿಸಿಟಿವಿ ಕಾರ್ಯವೆಸಗುತ್ತಿದೆ. ನಮಗೆ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಲಭ್ಯವಾಗಿವೆ.
- ಸಿಸಿಟಿವಿ ಕ್ಯಾಮೆರಾದ ವಯರ್ಗಳನ್ನು ತುಂಡರಿಸಲಾಗಿದೆ ಎಂದು ಹೇಳಿರುವ ಸುದ್ದಿ ಸುಳ್ಳು.
- ಗುಪ್ತಚರ ಇಲಾಖೆಯ ಯಾವುದೇ ಮಾಹಿತಿಯನ್ನು ಲಘುವಾಗಿ ಪರಿಗಣಿಸಿಲ್ಲ
- ಫೆ.15ಕ್ಕೆ ಲಭಿಸಿದ ಮಾಹಿತಿಯಲ್ಲಿ ಹೈದ್ರಾಬಾದ್ ಮತ್ತು ಇತರ ಮೂರು ನಗರಗಳಲ್ಲಿ ದಾಳಿ ಸಂಭವಿಸುವ ಸಾಧ್ಯತೆಯಿತ್ತು ಎಂದು ಹೇಳಲಾಗಿತ್ತು. ನಾವು ಇದಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಬಿಗಿ ಭದ್ರತೆ ಏರ್ಪಡಿಸಿದ್ದೆವು.
- ಕಳೆದ ವರ್ಷ ನವಂಬರ್ 15ರಂದು ನಮ್ಮ ಗುಪ್ತಚರ ತಂಡವು ದೆಹಲಿಗೆ ತೆರಳಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರನ್ನು ವಿಚಾರಣೆಗೊಳಪಡಿಸಿದ್ದೆವು. ಈ ಸದಸ್ಯರು ದಿಲ್ಸುಖ್ ನಗರ್, ಟ್ಯಾಂಕ್ಬಂಡ್ ಮತ್ತು ಬೇಗಂ ಬಜಾರ್ನಲ್ಲಿ ಸುತ್ತಾಡಿ ದಾಳಿಗೆ ಸಂಚು ರೂಪಿಸಿದ್ದರು. ಇದರಲ್ಲಿ ಭಾಗಿಯಾಗಿದ್ದ ಸದಸ್ಯರನ್ನು ಈಗಾಗಲೇ ಬಂಧಿಸಲಾಗಿದೆ.
- ಕಳೆದ ವರ್ಷ ನವಂಬರ್ನಲ್ಲಿ ನಾವು ದಾಳಿಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಿದ್ದೆವು.
- ಕಳೆದ ನವಂಬರ್ ತಿಂಗಳಿನಿಂದ ನಾವು ಎಲ್ಲ ವಾಹನಗಳ ತಪಾಸಣೆ ಮಾಡುತ್ತಾ ಬರುತ್ತಿದ್ದೇವೆ. ಇಂಥಾ ದಾಳಿಗಳನ್ನು ತಡೆಯಲು ಅಣಕ ಕವಾಯತುಗಳನ್ನೂ ಮಾಡಿದ್ದೇವೆ.
- ನಮ್ಮ ನಗರದಲ್ಲಿ 16 ಬಾಂಬ್ ನಿಷ್ಕೃಯ ದಳಗಳಿದ್ದು, ಅವುಗಳನ್ನು ಅಗತ್ಯ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
- ನಮ್ಮ ಕರ್ತವ್ಯದ ಬಗ್ಗೆ ನಾನು ಯಾರಿಗೂ ವಿವರಣೆ ನೀಡಲು ಬಯಸುವುದಿಲ್ಲ, ನಾವು ನಮ್ಮ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಿದ್ದೇವೆ.
- ಈ ಪ್ರಕರಣಕ್ಕೆ ಸಂಬಂಧ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
- ಕಳೆದ ಎರಡು ದಿನಗಳಿಂದ ಸಿಸಿಟಿವಿ ದೃಶ್ಯಾವಳಿ, ಇನ್ನಿತರ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.
- ಸ್ಫೋಟಕ್ಕಾಗಿ ಅಮೋನಿಯಂ ನೈಟ್ರೇಟ್ ಬಳಸಲಾಗಿದೆ.
- ತನಿಖೆಯ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ.