ಹೈ ಸ್ಫೋಟ: ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ
ಹೈದರಾಬಾದ್‌ನಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ 8 ಶಂಕಿತ ಉಗ್ರರ ರೇಖಾಚಿತ್ರವನ್ನು ಶುಕ್ರವಾರ ಬಿಡುಗಡೆ..
ಹೈದರಾಬಾದ್: ಹೈದರಾಬಾದ್‌ನಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ 8 ಶಂಕಿತ ಉಗ್ರರ ರೇಖಾಚಿತ್ರವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.
ನಿನ್ನೆ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರು ಕೇಂದ್ರ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಇಂದು 8 ಶಂಕಿತ ಉಗ್ರರ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
8 ಜನ ಶಂಕಿತ ಉಗ್ರರರೊಂದಿಗೆ ಇಂಡಿಯನ್ ಮುಜಾಹಿದ್ದೀನ್(ಐಎಂ) ಸಂಘಟನೆ ಸೇರಿದ ತಬ್ರೇಜ್ ಅಲಿಯಾಸ್ ಅಬ್ಲುಲ್ಲಾ ಅಖ್ತರ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ತಬ್ರೇಜ್ ದಾಳಿ ಮುಖ್ಯ ರೂವಾರಿಯಾಗಿದ್ದು, ದಾಳಿಯಲ್ಲಿ ಇನ್ನು ಇಬ್ಬರು ಉಗ್ರರ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಘಟನೆಯಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಕೈವಾಡ ಇರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ಸ್ಫಷ್ಟವಾದ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರೊಂದಿಗೆ ದೆಹಲಿ ಪೊಲೀಸರು ಐಎಂ ಉಗ್ರ ಮಖ್ಬುಲ್‌ನನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ಸದ್ಯ ತಿಹಾರ್ ಜೈಲಿನಲ್ಲಿರುವ ಮಖ್ಬುಲ್‌ನನ್ನು ಕಳೆದ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು.
ಮುತ್ತಿನ ನಗರಿ ಎಂದೇ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ಹೈದರಾಬಾದ್‌ನಲ್ಲಿ ಗುರುವಾರ 7 ಗಂಟೆಗೆ 2 ಪ್ರಬಲ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ 16 ಮಂದಿ ಅಸುನೀಗಿ, 119 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.