ಟೆಸ್ಟ್: ದ್ವಿಶತಕ ಬಾರಿಸಿದ ಧೋನಿ
ಚೆನ್ನೈ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ...
ಚೆನ್ನೈ: ಚೆನ್ನೈ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ 135 ರನ್ಗಳ ಮುನ್ನಡೆ ಸಾಧಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಥಮ ದ್ವಿಶತಕ ಬಾರಿಸಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 515 ರನ್ ಗಳಿಸಿದೆ.
ಪ್ರಸ್ತುತ ದಿನದಾಟದಲ್ಲಿ ಧೋನಿ ಅಜೇಯ 206 ರನ್ ಗಳಿಸಿದ್ದು, ಬಿ. ಕುಮಾರ್ 16 (ಅಜೇಯ) ರನ್ ಗಳಿಸಿದ್ದಾರೆ.
5 ಸಿಕ್ಸರ್ ಮತ್ತು 22 ಬೌಂಡರಿಗಳನ್ನು ಬಾರಿಸಿದ ಧೋನಿ 231 ಬಾಲ್ಗಳನ್ನೆದುರಿಸಿ ದ್ವಿಶತಕ ಪೂರೈಸಿದ್ದರು.
ಈ ಹಿಂದೆ ಪಾಕಿಸ್ತಾನದ ವಿರುದ್ಧ 148 ರನ್ಗಳನ್ನು ಗಳಿಸಿದ್ದು, ಅದು ಧೋನಿಯ ಅತ್ಯುತ್ತಮ ರನ್ ಆಗಿತ್ತು.
ಪಂದ್ಯದ ಎರಡನೇ ದಿನವಾದ ಶನಿವಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಅರ್ಧ ಶತಕದ ನೆರವಿನಿಂದ ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಪಾರಾಗಿತ್ತು.
ಶನಿವಾರ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಅನ್ನು 380 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದ ಭಾರತ, ತನ್ನ ಮೊದಲ ಇನಿಂಗ್ಸ್ ಪ್ರಾರಂಭಿಸಿ, ಆರಂಭದಲ್ಲೇ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ, ಸಚಿನ್ ಹಾಗೂ ಚೇತೇಶ್ವರ ಪೂಜಾರ ಇಬ್ಬರ ಉತ್ತಮ ಜೊತೆಯಾಟದ ನೆರವಿನಿಂದಾಗಿ ಭಾರತ ಚೇತರಿಸಿಕೊಂಡಿತು.
ಆಸೀಸ್ ತಂಡವನ್ನು 380 ರನ್ಗಳಿಗೆ ನಿಯಂತ್ರಿಸಿ, ತನ್ನ ಇನಿಂಗ್ಸ್ ಆರಂಭಿಸಿದ್ದ ಭಾರತಕ್ಕೆ ಪ್ಯಾಟಿನ್ಸನ್ ದೊಡ್ಡ ಪೆಟ್ಟು ನೀಡಿದರು. ತಂಡದ ಮೊತ್ತ ಕೇವಲ 11 ರನ್ ಆಗಿದ್ದಾಗ, ಆರಂಭಿಕ ಮುರಳಿ ವಿಜಯ್ ಅವರನ್ನು ಕ್ಲೀನ್ಬೌಲ್ಡ್ ಮಾಡಿದ ಅವರು, ತಂಡದ ಮೊತ್ತ 12 ರನ್ ಆಗಿದ್ದಾಗ, ಮತ್ತೊಬ್ಬ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರನ್ನೂ ಬಲಿ ತೆಗೆದುಕೊಂಡರು.
ಇಂಥ ಒತ್ತಡದ ಸಂದರ್ಭದಲ್ಲಿ ಇನಿಂಗ್ಸ್ನ ಸಾರಥ್ಯ ವಹಿಸಿಕೊಂಡಿದ್ದು ಮೂರನೇ ಕ್ರಮಾಂಕದ ಚೇತೇಶ್ವರ ಪೂಜಾರ ಹಾಗೂ ನಾಲ್ಕನೇ ಕ್ರಮಾಂಕದ ಸಚಿನ್ ತೆಂಡೂಲ್ಕರ್.
ತಾಳ್ಮೆ ಹಾಗೂ ಜವಾಬ್ದಾರಿಯುತ ಆಟವಾಡಿದ ಈ ಜೋಡಿ, 3ನೇ ವಿಕೆಟ್ಗೆ 98 ರನ್ ಸೇರಿಸಿತು. ಅದರಲ್ಲೂ ಬಹುದಿನಗಳಿಂದ ಫಾರ್ಮ್ ಇಲ್ಲದೇ ಟೀಕಾಕಾರರ ಗುರಿಯಾಗಿದ್ದ ಸಚಿನ್ ತೆಂಡೂಲ್ಕರ್ ಮತ್ತೆ ತಮ್ಮ ಬ್ಯಾಟ್ನ ಮೂಲಕವೇ ಉತ್ತರ ನೀಡಿದರು. 39 ವಯಸ್ಸಿನ ಈ ಹಿರಿಯ ಬ್ಯಾಟ್ಸ್ಮನ್, ಶನಿವಾರದ ದಿನದಾಟದಲ್ಲಿ ನೀಡಿದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸಚಿನ್ಗೆ ಮತ್ತೊಂದು ಗರಿ: ದೃಢವಾದ ಮನಸ್ಥೈರ್ಯ, ಕದಲದ ಆತ್ಮವಿಶ್ವಾಸಗಳು ಅವರ ಪ್ರತಿಯೊಂದು ಹೊಡೆತದಲ್ಲೂ ಕಾಣುತ್ತಿತ್ತು. ಸಚಿನ್ ಆಟದ ವೈಖರಿಯಲ್ಲೊಂದಾದ ಉತ್ತಮ ಫುಟ್ವರ್ಕ್ ಅವರ ಆಟದಲ್ಲಿ ಎದ್ದುಕಾಣುತ್ತಿತ್ತು. ಸಾವಧಾನದಿಂದ ಬ್ಯಾಟ್ ಬೀಸುತ್ತಾ ಹೋದ ಅವರು ತಮ್ಮ 67ನೇ ಟೆಸ್ಟ್ ಅರ್ಧ ಶತಕವನ್ನು ಗಳಿಸುವಲ್ಲಿ ಯಶಸ್ವಿಯಾದರು.
ಅದಲ್ಲದೇ, ತವರಿನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ 7 ಸಾವಿರ ರನ್ ಗಡಿ ದಾಟಿ ಮತ್ತೊಂದು ಸಾಧನೆ ಮಾಡಿದರು.
ಅವರಿಗೆ ಕ್ರೀಸ್ನಲ್ಲಿ ಉತ್ತಮವಾಗಿ ಬೆಂಬಲ ನೀಡಿದ ಚೇತೇಶ್ವರ ಪೂಜಾರ, ಉತ್ತಮ ಆಟ ಪ್ರದರ್ಶಿಸಿದರು. ಇವರಿಬ್ಬರೂ ಜೋಡಿಯಾದ ನಂತರ 13ನೇ ಓವರ್ನಲ್ಲಿ ತಂಡದ ಮೊತ್ತವನ್ನು 50 ರನ್ ಗಡಿ ದಾಟಿಸಿದ್ದರು. ಇವರಿಬ್ಬರ ಸಮಯೋಚಿತ ಬ್ಯಾಟಿಂಗ್ನ ನೆರವಿನಿಂದ ಭಾರತದ ಇನಿಂಗ್ಸ್ ಚೇತರಿಸಿಕೊಂಡಿತು.
29ನೇ ಓವರ್ನಲ್ಲಿ ಚೇತೇಶ್ವರ ಪೂಜಾರ ಅವರನ್ನು ಪೆವಿಲಿಯನ್ಗೆ ಕಳಿಸುವಲ್ಲಿ ಪ್ಯಾಟಿನ್ಸನ್ ಯಶಸ್ವಿಯಾದರು. ಆಗ, ಸಚಿನ್ಗೆ ಸಾಥ್ ನೀಡಲು ಬಂದಿದ್ದು ವಿರಾಟ್ ಕೊಹ್ಲಿ. ಈ ಜೋಡಿಯೂ ಸಹ ನಾಲ್ಕನೇ ವಿಕೆಟ್ಗೆ ದಿನಾಂತ್ಯದವರೆಗೂ ಮುರಿಯದ ಜೊತೆಯಾಟವಾಡಿ, 77 ರನ್ಗಳ ಜೊತೆಯಾಟವಾಡಿತು. ದಿನಾಂತ್ಯದ ಹೊತ್ತಿಗೆ 3 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿರುವ ಭಾರತದ ಪರವಾಗಿ, ಗಳಿಸಿದ್ದ ಸಚಿನ್ (71) ಜೊತೆ 7ನೇ ಟೆಸ್ಟ್ ಶತಕಾರ್ಧ ಗಳಿಸಿರುವ ಕೊಹ್ಲಿ (50) ಕ್ರೀಸ್ನಲ್ಲಿದ್ದರು.
ಭಾನುವಾರ ಪಂದ್ಯ ಆರಂಭವಾದಾಗ 71 ರನ್ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಮತ್ತು 50 ಶತಕ ಗಳಿಸಿದ್ದ ಕೊಹ್ಲಿ ತಮ್ಮ ಆಟವನ್ನು ಮುಂದುವರಿಸಿದರು. ಈ ಟೆಸ್ಟ್ನಲ್ಲಿ ಸಚಿನ್ ತೆಂಡೂಲ್ಕರ್ ಶತಕ ಪೂರೈಸುತ್ತಾರೆ ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಆದರೆ ಸಚಿನ್ 64ನೇ ಓವರ್ನಲ್ಲಿ ಲಿಯಾನ್ ಬಾಲ್ಗೆ ಔಟಾಗಿ ಪೆವಿಲಿಯನ್ಗೆ ನಡೆದರು. ಸಚಿನ್ಗೆ 81 ಗಳನ್ನು ಗಳಿಸಲು ಸಾಧ್ಯವಾಯಿತಷ್ಟೇ.
ಸಚಿನ್ ನಿರ್ಗಮನದ ನಂತರ ಕ್ರೀಸ್ಗಿಳಿದ ಧೋನಿ ಕೊಹ್ಲಿ ಜತೆ ಉತ್ತಮ ಜತೆಯಾಟ ಆಡಿದ್ದಲ್ಲದೆ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಪ್ರಸ್ತುತ ಪಂದ್ಯದಲ್ಲಿ ಕೊಹ್ಲಿ 1ಂ7 ರನ್ ಗಳಿಸಿ 90 ನೇ ಓವರ್ನಲ್ಲಿ ಲಿಯಾನ್ಗೆ ವಿಕೆಟ್ ಒಪ್ಪಿಸಿದಾಗ ಕೊಹ್ಲಿ-ಧೋನಿ ಜುಗಲ್ಬಂದಿ ಕೊನೆಗೊಂಡಿತು.
ಕೊಹ್ಲಿಯ ನಂತರ ಜಡೇಜಾ ಧೋನಿಗೆ ಸಾಥ್ ನೀಡಿದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಆಗಲಿಲ್ಲ. ಜಡೇಜಾ 16 ರನ್ ಗಳಿಸಿ ಪೆವಿಲಿಯನ್ಗೆ ನಿರ್ಗಮಿಸಿದರೆ, ನಂತರ ಬಂದ ಆರ್ ಅಶ್ವಿನ್ 3 ರನ್ ಗಳಿಸಿ ಔಟಾದರು.
ಅಶ್ವಿನ್ ನಂತರ ಹರ್ಭಜನ್ ಸಿಂಗ್ ಕ್ರೀಸ್ ಗಿಳಿದಿದ್ದು, 11 ರನ್ ಗಳಿಸಿ ಹೆನ್ರಿ ಕ್ವಿಸ್ಗೆ ವಿಕೆಟ್ ಒಪ್ಪಿಸಿದರು. ಕೊನೆಯ ಬ್ಯಾಟ್ಸ್ಮನ್ ಬಿ. ಕುಮಾರ್ ಧೋನಿಗೆ ಸಾಥ್ ನೀಡಿದ್ದು, ದಿನದಾಟ ಮುಕ್ತಾಯವಾಗುವಾಗ ಕುಮಾರ್ 16 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.