ಪೂಜಾ ಕುಣಿತ: ಬಿಎಸ್ಆರ್ ಕಾಂಗ್ರೆಸ್ಗೆ ಮಳೆ ಹುಡುಗಿ?
ಬಳ್ಳಾರಿ: ಕುಣಿದು ಕುಣಿದು ಬಾರೆ... ಎಂಬ "ಮುಂಗಾರು ಮಳೆ' ಚಿತ್ರದ ಹಾಡಿನಿಂದ ಸ್ಯಾಂಡಲ್ವುಡ್ನಲ್ಲಿ ವರ್ಲ್ಡ್ ಫೇಮಸ್ ಆದ ಮಳೆ ಹುಡುಗಿ ಪೂಜಾ ಗಾಂಧಿ ಈಗ ರಾಜಕೀಯದಲ್ಲೂ ತಮ್ಮ ಜಿಗಿತ ಮುಂದುವರೆಸಿದ್ದಾರೆ.
ಅಲ್ಲಿಂದ ಇಲ್ಲಿಗೆ... ಇಲ್ಲಿಂದ ಅಲ್ಲಿಗೆ.. ಎಂಬಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪೂಜಾ ಜಿಗಿಯುತ್ತಿದ್ದಾರೆ. ಇತ್ತೀಚಗಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಸೇರಿದ್ದ ಪೂಜಾ ಗಾಂಧಿ, ಈಗ ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ.
2012 ಜನವರಿ 18ರಂದು ಜೆಡಿಎಸ್ ಸೇರಿದ್ದ ಪೂಜಾ, ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಜೆಡಿಎಸ್ ತೊರೆದು 2012ರ ಡಿಸೆಂಬರ್ 9ರಂದು ಕೆಜೆಪಿಗೆ ಸೇರಿದ್ದರು. ಇದೀಗ ಮತ್ತೆ ಪಕ್ಷ ಬದಲಿಸಲು ನಿರ್ಧರಿಸಿದ್ದು, ಈ ಸಂಬಂಧ ಇಂದು ಬಳ್ಳಾರಿಯಲ್ಲಿ ಬಿಎಸ್ಆರ್ ವರಿಷ್ಠ ಶ್ರೀರಾಮುಲು ಅವರನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ.