ಎನ್‌ಸಿಪಿ, ಎಂಎನ್‌ಎಸ್ ಕಾರ್ಯಕರ್ತರ ನಡುವೆ ಸಂಘರ್ಷ
ಮಂಗಳವಾರ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅಹಮದ್ ನಗರ್...
ಪುಣೆ: ಮಂಗಳವಾರ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅಹಮದ್ ನಗರ್ ಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿ ಹಿಂತಿರುಗುತ್ತಿದ್ದ ವೇಳೆ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ಠಾಕ್ರೆಯವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.
ಇದಾದ ನಂತರ ಎಂಎನ್‌ಎಸ್ ಮತ್ತು ಎನ್‌ಸಿಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಇದರಲ್ಲಿ ಐದು ಮಂದಿಗೆ ಗಾಯಗಳಾಗಿವೆ.
ಈ ಸಂಘರ್ಷದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದು, ಠಾಕ್ರೆಯವರಿಗೆ ಏನೂ ಆಗಿಲ್ಲ.
ಈ ಘಟನೆ ಮಹಾರಾಷ್ಟ್ರದ ಪಶ್ಚಿಮ ಜಿಲ್ಲೆಯಾದ ಭಿನ್‌ಗರ್‌ನಲ್ಲಿ ರಾತ್ರಿ 8.30ಕ್ಕೆ ಸಂಭವಿಸಿದೆ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಕೂಡಾ ಮಾಡಿದ್ದಾರೆ.
ಪಕ್ಷದ ಹಿರಿಯ ನಾಯಕ ಹಾಗು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನ್ನು ರಾಜ್ ಠಾಕ್ರೆ ಟೀಕಿಸಿದಕ್ಕಾಗಿ ಎನ್‌ಸಿಪಿ ಕಾರ್ಯಕರ್ತರು ಠಾಕ್ರೆಯವರ ವಿರುದ್ಧ ಘೋಷಣೆ ಕೂಗಿದ್ದಾರೆ.
ಠಾಕ್ರೆ ಭಾಷಣ ಮಾಡಿದ್ದ ಸಾರ್ವಜನಿಕ ಸಭೆಯಲ್ಲಿ ಸುಮಾರು 50 ಎನ್‌ಸಿಪಿ ಕಾರ್ಯಕರ್ತರು ಹಾಜರಿದ್ದು, ಠಾಕ್ರೆ ವಿರುದ್ಧ ಘೋಷಣೆ ಕೂಗಿ ಸಂಘರ್ಷಕ್ಕೆಡೆ ಮಾಡಿದ್ದರು ಎಂದು ಬಲ್ಲಮೂಲಗಳು ವರದಿ ಮಾಡಿವೆ.