ಕೋಲ್ಕತಾದಲ್ಲಿ ಅಗ್ನಿ ಅವಘಡ: 18 ಸಾವು
ಕೋಲ್ಕತಾದ ಸೀಲ್ದಾಹ ಪ್ರದೇಶದಲ್ಲಿರುವ ಆರು ಮಹಡಿಯ ಮಾರುಕಟ್ಟೆ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಬೆಳಗಿನ ಜಾವ ಭಾರಿ ಅಗ್ನಿ ಅವಘಡ ಸಂಭವಿಸಿದ್ದು,..
ಕೋಲ್ಕತಾ: ಕೋಲ್ಕತಾದ ಸೀಲ್ದಾಹ ಪ್ರದೇಶದಲ್ಲಿರುವ ಆರು ಮಹಡಿಯ ಮಾರುಕಟ್ಟೆ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಬೆಳಗಿನ ಜಾವ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 18 ಜನ ಮೃತಪಟ್ಟಿದ್ದಾರೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ.
ಇಂದು ಬೆಳಗಿನ ಜಾವ 3.50ರ ಸುಮಾರಿಗೆ ಈ ಅಗ್ನಿ ದುರಂತ ಸಂಭವಿಸಿದ್ದು, ಓರ್ವ ಮಹಿಳೆ ಸೇರಿದಂತೆ ಕಟ್ಟದಲ್ಲಿಯೇ ಮಲಗಿದ್ದ ಹಲವು ಕಾರ್ಮಿಕರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಎನ್‌ಆರ್‌ಎಸ್ ಮತ್ತು ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಜಾವೇದ್ ಶಮಿಮ್ ಅವರು ಹೇಳಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ದಾವಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಅವಘಡಕ್ಕೆ ಏನು ಕಾರಣ ಎಂಬುದು ಈವರೆಗೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಜಾವೇದ್ ತಿಳಿಸಿದ್ದಾರೆ.
25 ಅಗ್ನಿ ಶಾಮಕ ವಾಹನಗಳು ಸತತ 3ಗಂಟೆಗಳಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ಇದುವರೆಗೂ ಒಟ್ಟು 9 ಜನರನ್ನು ರಕ್ಷಿಸಲಾಗಿದ್ದು, ಕಟ್ಟಡದೊಳಗೆ ಇನ್ನು ಎಷ್ಟು ಜನ ಸಿಲುಕಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.