'ದಿ ಅಟ್ಯಾಕ್ಸ್ ಆಫ್ 26/11' ಚಿತ್ರವನ್ನು ತಿರಸ್ಕರಿಸಿದ ಯುಎಇ
ರಾಮ್ಗೋಪಾಲ್ ವರ್ಮಾ ಅವರ ಬಹುನಿರೀಕ್ಷಿತ 'ದಿ ಅಟ್ಯಾಕ್ಸ್ ಆಫ್ 26/11' ಚಿತ್ರವನ್ನು ಸಂಯುಕ್ತ ಅರಬ್ ಎಮಿರೇಟ್ಸ್ ತಿರಸ್ಕರಿಸಿದೆ.
26/11 ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಆಧಾರಿತ ಚಿತ್ರ ಇದಾಗಿದ್ದು, ಇದರಲ್ಲಿ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಸಂಘಟನೆಯ 10 ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿರುವುದರ ಕುರಿತು ಚಿತ್ರಸಲಾಗಿದೆ. ನೈಜ ಘಟನೆ ಆಧಾರಿತ ಚಿತ್ರ ಪ್ರದರ್ಶನಕ್ಕೆ ದುಬೈ ಸೆನ್ಸಾರ್ ಮಂಡಳಿ ಅಡ್ಡಿ ಮಾಡಿದ್ದು, ಚಿತ್ರ ಪ್ರದರ್ಶನ ಮಾಡಲು ಹಿಂಜರಿಯುತ್ತಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ 166 ಜನರು ಅಸುನೀಗಿದ್ದಾರೆ. ಈ ರೋಚಕ ನೈಜ ಘಟನೆ ಆಧಾರಿತ ಚಿತ್ರ 'ದಿ ಅಟ್ಯಾಕ್ ಆಫ್ 26/11'. ಹೆಸರಾಂತ ಬಾಲಿವುಡ್ ನಟ ನಾನಾ ಪಾಟೇಕರ್ ಚಿತ್ರದಲ್ಲಿ ಜಂಟಿ ಆಯುಕ್ತರ ಪಾತ್ರ ಮಾಡಿದ್ದು, ದಾಳಿ ಕುರಿತು ತನಿಖೆ ನಡೆಸುವ ಅಧಿಕಾರಿಯಾಗಿದ್ದಾರೆ. ಸಂಜೀವ್ ಜೈಸ್ವಾಲ್ ಅವರು ಉಗ್ರ ಅಜ್ಮಲ್ ಕಸಬ್ನ ಪಾತ್ರ ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ದಾಳಿ ನಡೆಸಿದ ಅಪರಾಧದ ಮೇಲೆ ಅಜ್ಮಲ್ ಕಸಬ್ಗೆ ನೇಣು ಹಾಕಲಾಯಿತು.
ಅತುಲ್ ಕುಲಕರ್ಣಿ ಮತ್ತು ಗಣೇಶ್ ಯಾದವ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ಭಾರತದಾದ್ಯಂತ ತೆರೆ ಕಾಣಲಿದೆ.
ಈಗಾಗಲೇ ಚಿತ್ರವನ್ನು ರಾಜಕಾರಣಿಗಳು ವೀಕ್ಷಿಸಿದ್ದಾರೆ ಎಂದು ಚಿತ್ರದ ತಂಡ ಹೇಳಿದೆ.