ಸತ್ವವಿಲ್ಲದ ಕೇಂದ್ರ ಬಜೆಟ್: ಬಿಜೆಪಿ
ನವದೆಹಲಿ: 2013-14ನೇ ಸಾಲಿನ ಕೇಂದ್ರ ಬಜೆಟ್ ಕಲ್ಪಿಸಲಾಗದಂತದ್ದು ಹಾಗೂ ಸತ್ವವಿಲ್ಲದ್ದು ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ಗುರುವಾರ ಹೇಳಿದೆ.
ಹಣಕಾಸು ಸಚಿವ ಪಿ.ಚಿದಂಬರಂ ಅವರು ಮಂಡಿಸಿರುವ ಕೇಂದ್ರ ಬಜೆಟ್ ಸತ್ವವಿಲ್ಲದ್ದು ಎಂದು ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಮಧ್ಯಮ ವರ್ಗ ಮತ್ತು ಬಡವರಿಗೆ ಬಜೆಟ್ನಲ್ಲಿ ಅನ್ಯಾಯ ಮಾಡಲಾಗಿದೆ. ಮಹಿಳೆ, ಯುವಜನತೆ ಮತ್ತು ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಾಡವಲ್ಲಿ ಚಿದಂಬರಂ ವಿಫಲರಾಗಿದ್ದಾರೆ ಎಂದು ಅವರು ವಿಷಾಧಿಸಿದ್ದಾರೆ.
ಬೆಲೆ ಏರಿಕೆಯನ್ನು ಕಡಿಮೆ ಮಾಡಿ ಕೃಷಿಯತ್ತ ಹೆಚ್ಚು ಗಮನ ಹರಿಸಲು ಕೇಂದ್ರ ಸರ್ಕಾರ ಮುಂದಾಗದಿರುವುದು ವಿಷಾಧನೀಯ ಸಂಗತಿ. ಬಡವರಿಗೆ ಮತ್ತು ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸುವಂತಹ ಯಾವುದೇ ನೂತನ ಯೋಜನೆಗಳನ್ನು ಕೇಂದ್ರ ಸರ್ಕಾರ ಹೊರತಂದಿಲ್ಲ ಎಂದು ಅವರು ದೂರಿದ್ದಾರೆ.
ಮುಂದಿನ ಲೋಕಸಭಾ ಚುನವಣೆ ದೃಷ್ಟಿಯಲ್ಲಿಟ್ಟುಕೊಂಡು ಯುಪಿಎ ಸರ್ಕಾರ ಜನರಿಗೆ ಅನುಕೂಲವಾಗುವಂತಹ ಬಜೆಟ್ ಹೊರತರಬಹುದು ಎಂದು ಕಲ್ಪನೆಯಿತ್ತು. ಆದರೆ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಸತ್ವವಿಲ್ಲದ್ದು ಎಂದು ಕಲ್ಪಸಿರಲಿಲ್ಲ ಎಂದು ಸುಷ್ಮಾ ಹೇಳಿದ್ದಾರೆ.