ಕಾರು ಖರೀದಿಸಿ ಬೆಂಕಿ ಹಚ್ಚಿದ್ರು; ಇದು ಎಂಎನ್‌ಎಸ್ ಪ್ರತಿಭಟನೆಯ ಪರಿ
ರಾಜ್ ಠಾಕ್ರೆ ಮತ್ತು ಅವರ ಮಹರಾಷ್ಟ್ರ ನವ ನಿರ್ಮಾಣ ಸೇನೆ ಏನಾದರೂ ಮಾಡುತ್ತಿದೆ ಅಂದರೆ ಅದಕ್ಕೆ ಅದರದ್ದೇ ಆದ ಒಂದು ಸ್ಟೈಲ್ ...
ಮುಂಬೈ: ರಾಜ್ ಠಾಕ್ರೆ ಮತ್ತು ಅವರ ಮಹರಾಷ್ಟ್ರ ನವ ನಿರ್ಮಾಣ ಸೇನೆ ಏನಾದರೂ ಮಾಡುತ್ತಿದೆ ಅಂದರೆ ಅದಕ್ಕೆ ಅದರದ್ದೇ ಆದ ಒಂದು ಸ್ಟೈಲ್ ಇರುತ್ತದೆ.
ಇಲ್ಲಿ ಪ್ರಸ್ತಾಪಿಸಿರುವ ವಿಷ್ಯವೂ ಅದೇ ಆಗಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ವಿರುದ್ಧ ಟೀಕೆ ಮಾಡಿದ್ದ ರಾಜ್‌ಠಾಕ್ರೆ ಅವರ ವಿರುದ್ಧ ಎನ್‌ಸಿಪಿ ಕಾರ್ಯಕರ್ತರು ಒಂದಲ್ಲ ಒಂದು ರೀತಿಯಲ್ಲಿ ಮುಯ್ಯಿ ತೀರಿಸುತ್ತಲೇ ಇದ್ದಾರೆ.
ಎರಡು ದಿನಗಳ ಹಿಂದೆ ಅಹಮದ್‌ನಗರದಲ್ಲಿ ಠಾಕ್ರೆ ಅವರ ಕಾರ್ ಮೇಲೆ ಎನ್‌ಸಿಪಿ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದು, ಇದು ಎನ್‌ಸಿಪಿ ಮತ್ತು ಎಂಎನ್‌ಎಸ್ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆಡೆ ಮಾಡಿತ್ತು.
ಆದಾಗ್ಯೂ, ಎನ್‌ಸಿಪಿ ಕಾರ್ಯಕರ್ತರ ವಿರುದ್ಧ ಸಿಡಿದೆದ್ದಿರುವ ಎಂಎನ್‌ಎಸ್ ಕಾರ್ಯಕರ್ತರು ಶುಕ್ರವಾರ ಮುಂಬೈ ಕುರ್ಲಾದಲ್ಲಿ ಕಾರೊಂದಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ವ್ಯಕ್ತ ಪಡಿಸಿದ್ದಾರೆ. ಎಂಎನ್‌ಎಸ್ ಕಾರ್ಯಕರ್ತರು ತಮ್ಮ ನಾಯಕನನ್ನು ಮೆಚ್ಚಿಸುವ ಸಲುವಾಗಿ ಸೆಕೆಂಡ್‌ಹ್ಯಾಂಡ್ ಕಾರ್‌ಡೀಲರ್ ನಿಂದ 35,000 ರು. ತೆತ್ತು ಮಾರುತಿ 800 ಕಾರನ್ನು ಖರೀದಿಸಿ ಅದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಎಫ್‌ಐಆರ್ ದಾಖಲಿಸಿದ ಮುಂಬೈ ಪೊಲೀಸರು ಹೇಳಿದ್ದಾರೆ.
ಮುಂಬೈಯ ಕುರ್ಲಾದ ಎಲ್‌ಬಿಎಸ್ ಮಾರ್ಗದಲ್ಲಿ ಕಾರಿಗೆ ಬೆಂಕಿ ಹಚ್ಚಿ ಎಂಎನ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಸುದ್ದಿಮಾಧ್ಯಮಗಳಲ್ಲಿ ಪ್ರಸಾರವಾದೊಡನೆ ರಾಜ್ಯಾದ್ಯಾಂತ ಜನರು ಗಾಬರಿಗೊಳಗಾಗಿದ್ದಾರೆ.
ಕಾರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದ ಎಂಎನ್‌ಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.