ಸರ್ಕಾರ ಯಾವುದೇ ಸಂಸದರ ಫೋನ್ ಟ್ಯಾಪ್ ಮಾಡಿಲ್ಲ: ಶಿಂಧೆ
ಬಿಜೆಪಿ ನಾಯಕ ಅರುಣ್ ಜೇಟ್ಲಿ ಸೇರಿದಂತೆ ಯಾವುದೇ ಸಂಸದರ ದೂರವಾಣಿ ಕರೆಯನ್ನು ಸರ್ಕಾರ ಕದ್ದಾಲಿಸಿಲ್ಲ ಎಂದು ಗೃಹ..
ನವದೆಹಲಿ: ಬಿಜೆಪಿ ನಾಯಕ ಅರುಣ್ ಜೇಟ್ಲಿ ಸೇರಿದಂತೆ ಯಾವುದೇ ಸಂಸದರ ದೂರವಾಣಿ ಕರೆಯನ್ನು ಸರ್ಕಾರ ಕದ್ದಾಲಿಸಿಲ್ಲ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಜೇಟ್ಲಿ ಅವರ ದೂರವಾಣಿಯ ಕದ್ದಾಲಿಕೆ ನಡೆದಿಲ್ಲ. ಕಾನೂನು ಬಾಹಿರವಾಗಿ ಅವರ ದೂರವಾಣಿ ಕರೆಯ ವಿವರವನ್ನು ಪಡೆದುಕೊಳ್ಳಲಾಗಿದೆ. ಈ ಸಂಬಂಧ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸಲಾಗುವುದು ಎಂದು ಶಿಂಧೆ ಭರವಸೆ ನೀಡಿದರು.
ಭಾರತ ಸರ್ಕಾರ ಯಾವುದೇ ಸಂಸದರ ದೂರವಾಣಿ ಕರೆಯನ್ನು ಕದ್ದಾಲಿಸಿಲ್ಲ. ಕೇಂದ್ರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಮತ್ತು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿಯವರಿಗೆ ಮಾತ್ರ ಆ ಅಧಿಕಾರ ಇದೆ ಎಂದು ಶಿಂಧೆ ರಾಜ್ಯಸಭೆಗೆ ತಿಳಿಸಿದರು.
ಖಾಸಗಿ ಬೇಹುಗಾರಿಕೆಯವರು ಜೇಟ್ಲಿ ಅವರ ದೂರವಾಣಿ ಕರೆಯ ವಿವರ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿಂಧೆ, ತನಿಖೆಯ ಭಾಗವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರ ದೂರವಾಣಿ ಕರೆಯ ವಿವರ ಪಡೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ. ಆದರೆ ಜೇಟ್ಲಿ ಅವರ ಪ್ರಕರಣದಲ್ಲಿ ಕಾನೂನು ಬಾಹಿರವಾಗಿ ಪಡೆದುಕೊಂಡಿದ್ದಾರೆ. ಇದು ಪ್ರತಿಪಕ್ಷದ ನಾಯಕರ ಪ್ರಕರಣವಾಗಿರುವುದರಿಂದ ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರ ತನಿಖೆ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳವುದಾಗಿ ಹೇಳಿದರು.