'ಹೈ'ಸ್ಫೋಟ: ಐಎಂ ಶಂಕಿತ ಉಗ್ರರ ವಿಚಾರಣೆ
ಹೈದ್ರಾಬಾದ್: ಹೈದ್ರಾಬಾದ್ ಅವಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಶುಕ್ರವಾರ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರರನ್ನು ವಿಚಾರಣೆಗೊಳಪಡಿಸಿದೆ.
ಸ್ಫೋಟಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರರನ್ನು 5 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ವಶಕ್ಕೆ ನೀಡುವಂತೆ ದೆಹಲಿ ಕೋರ್ಟ್ ಆದೇಶಿಸಿತ್ತು.
ತಿಹಾರ್ ಜೈಲಿನಲ್ಲಿದ್ದ ಇಬ್ಬರು ಶಂಕಿತ ಉಗ್ರರನ್ನು ಇಂದು ಹೈದ್ರಾಬಾದ್ಗೆ ಕರೆತರಲಾಗಿದ್ದು, ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ಫೆಬ್ರವರಿ 21ರಂದು ಹೈದ್ರಾಬಾದ್ನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬಾಂಬ್ ಸ್ಫೋಟವಾಗಿ 16 ಜನರನ್ನು ಬಲಿತೆಗದುಕೊಂಡಿತ್ತು. ಈ ಸಂಬಂಧ ತನಿಖೆ ನಡೆಸಲು ಎನ್ಐಎ ರಚಿಸಲಾಯಿತು.
ತನಿಖೆ ಚುರುಕುಗೊಳಿಸಿರುವ ಎನ್ಐಎ, ಆಗಸ್ಟ್ 2012ರ ಪೂಣೆ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿರಿಸಲಾಗಿತ್ತು.