ನಾನು ಹೋಗಿ ಪ್ರಧಾನಿಗೆ ಹೊಡೆಯಬೇಕಾ?: ಮಮತಾ ಪ್ರಶ್ನೆ
ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾನು ಗೊಬ್ಬರ ಬೆಲೆ ಏರಿಕೆ ...
ಕನ್ನಿಂಗ್: ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾನು ಗೊಬ್ಬರ ಬೆಲೆ ಏರಿಕೆ ನಿರ್ಧಾರವನ್ನು ಪ್ರತಿಭಟಿಸಿ ಹಲವಾರು ಬಾರಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇನೆ. ಆದರೆ ಯಾವುದೇ ಪ್ರಯೋಜನವುಂಟಾಗಿಲ್ಲ ಎಂದು ಹೇಳಿದ್ದಾರೆ.
ನಾನು ಪ್ರಧಾನಿಯವರನ್ನು 10ಕ್ಕಿಂತಲೂ ಹೆಚ್ಚು ಬಾರಿ ಭೇಟಿಯಾಗಿದ್ದೇನೆ. ಇದಕ್ಕಿಂತ ಹೆಚ್ಚಿನದ್ದೇನೂ ಮಾಡಲು ನನಗೆ ಸಾಧ್ಯವಿಲ್ಲ. ನಾನು ಹೋಗಿ ಅವರಿಗೆ ಹೊಡೆಯಬೇಕಾ?. ನಾನೇನಾದರೂ ಹಾಗೆ ಮಾಡಿದರೆ ನಾನು ಗೂಂಡಾ ಆಗಿ ಬಿಡುತ್ತೇನೆ. ನಾನು ಅಂಥದ್ದೇನೂ ಮಾಡದೇ ಇದ್ದರೂ ನನ್ನನ್ನು ಗೂಂಡಾ ಎಂದು ಕರೆಯಲಾಗುತ್ತದೆ. ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಇದಕ್ಕೆ ಪರಿಹಾರ ಏನಿದೆ ಎಂಬುದು ನನಗೆ ಗೊತ್ತು. ಅದೇನೆಂದರೆ ನಾವೇ ಒಂದು ಗೊಬ್ಬರ ಕಾರ್ಖಾನೆಯನ್ನು ಸ್ಥಾಪಿಸಬೇಕು. ಇದಕ್ಕಾಗಿ ಮೂರು ನಾಲ್ಕು ವರ್ಷ ಬೇಕಾಗಿ ಬರಬಹುದು ಎಂದು ಮಮತಾ ನುಡಿದಿದ್ದಾರೆ.
ಅದೇ ವೇಳೆ ಕೇಂದ್ರ ಸರ್ಕಾರವು ವಿದೇಶಿ ನೇರಂ ಬಂಡವಾಳ ಹೂಡಿಕೆಗೆ ಅವಕಾಶ ಕೊಡುವ ಮೂಲಕ ಹಾಗು ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಎಫ್‌ಡಿಐ ಮತ್ತು ಜನವಿರೋಧಿ ನಿಲುವುಗಳಾದ ಡೀಸೆಲ್ ಬೆಲೆ, ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಗಳಿಗೆ ನಾವು ಅನುಮತಿ ನೀಡುವುದಿಲ್ಲ ಎಂದುಲ ಮಮತಾ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಇದೇ ವಿಷಯವನ್ನು ವಿರೋಧಿಸಿ ಮಮತಾರ ತೃಣಮೂಲ ಕಾಂಗ್ರೆಸ್ ಕೇಂದ್ರ ಸರ್ಕಾರದಿಂದ ತಮ್ಮ ಬೆಂಬಲ ವಾಪಸ್ ಪಡೆದುಕೊಂಡಿತ್ತು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ವರ್ಷ ಅಗಸ್ಟ್ - ಸಪ್ಟೆಂಬರ್ ತಿಂಗಳಲ್ಲಿ ಚುನಾವಣೆ ಎದುರಿಸಬೇಕಾಗಿ ಬರುತ್ತದೆ. ಆದಾಗ್ಯೂ, ಮುಂದೆ ಕೇಂದ್ರ ಬಜೆಟ್ ಮಂಡಿಸುವ ಯಾವುದೇ ಸೂಚನೆಗಳು ಕಂಡು ಬರುತ್ತಿಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ.