ದೆಹಲಿ ಗ್ಯಾಂಗ್ ರೇಪ್: ವರದಿ ಸಲ್ಲಿಸಿದ ನ್ಯಾಯಮೂರ್ತಿ ವರ್ಮಾ ಸಮಿತಿ
ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಸಲುವಾಗಿ ಕಾನೂನಿನಲ್ಲಿ ತಿದ್ದುಪಡಿ ತರಲು ಬೇಕಾದ ಸಲಹೆಗಳನ್ನು ನ್ಯಾಯಮೂರ್ತಿ ಜೆಎಸ್ ವರ್ಮಾ ಸಮಿತಿ ಗೃಹ ಸಚಿವಾಲಯಕ್ಕೆ ಸಲ್ಲಿಸಿದೆ.
ಡಿಸೆಂಬರ್ 16ರಂದು ದೆಹಲಿಯಲ್ಲಿ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೀಡಾದ ಹಿನ್ನೆಲೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನು ಜಾರಿ ಮಾಡಬೇಕೆಂದು ದೇಶಾದ್ಯಂತ ಜನರು ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಮೂವರು ಸದಸ್ಯರ ಸಮಿತಿ ರೂಪೀಕರಿಸಿದ್ದು, ಸಂವಿಧಾನದಲ್ಲಿನ ನಿಯಮಗಳ ತಿದ್ದುಪಡಿಗೆ ಸಲಹೆ ಸೂಚಿಸಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು.
ಗೃಹ ಸಚಿವಾಲಯಕ್ಕೆ ಬುಧವಾರ ವರ್ಮಾ ಸಮಿತಿ ಸಲ್ಲಿಸಿರುವ ವರದಿ 200 ಪುಟಗಳಿಷ್ಟಿದ್ದು, ಇದರಲ್ಲಿ ಅತ್ಯಾಚಾರ ವಿರೋಧಿ ನಿಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ನಿಯಮ ತಿದ್ದುಪಡಿಗಾಗಿ ಸಲಹೆ ಸೂಚನೆ ನೀಡುವಂತೆ ಸಾರ್ವಜನಿಕರಲ್ಲಿ ಕೇಳಿಕೊಂಡಾಗ, ಪ್ರಸ್ತುತ ಸಮಿತಿಗೆ ಸುಮಾರು 65,000 ಸಲಹೆಗಳು ಲಭಿಸಿದ್ದವು.
ಏತನ್ಮಧ್ಯೆ, ಅತ್ಯಾಚಾರದಲ್ಲಿ ಭಾಗಿಯಾಗಿರುವ ಜನರಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಈ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಆದಾಗ್ಯೂ, ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕಾಂಗ್ರೆಸ್ ಪಕ್ಷ ವರ್ಮಾ ಸಮಿತಿಗೆ ಸಲಹೆ ನೀಡಿತ್ತು.
ಈ ನಡುವೆ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗು ನಿಯಮ ತಿದ್ದುಪಡಿಗಾಗಿ ಪಾರ್ಲಿಮೆಂಟ್ನಲ್ಲಿ ವಿಶೇಷ ಕಲಾಪ ನಡೆಸಬೇಕೆಂದು ಬಿಜೆಪಿ ಒತ್ತಾಯಿಸಿದೆ.