ರಾಜ್ನಾಥ್ ವಿರುದ್ಧ ದಿಗ್ವಿಜಯ್ ವಾಗ್ದಾಳಿ
ಆರೆಸ್ಸೆಸ್ ಕೇಸರಿ ಭಯೋತ್ಪಾದನೆಯಲ್ಲಿ ತೊಡಗಿದೆ ಎಂದು ಹೇಳಿರುವ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷ ರಾಜ್ನಾಥ್ ಸಿಂಗ್...
ನವದೆಹಲಿ: ಆರೆಸ್ಸೆಸ್ ಕೇಸರಿ ಭಯೋತ್ಪಾದನೆಯಲ್ಲಿ ತೊಡಗಿದೆ ಎಂದು ಹೇಳಿರುವ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷ ರಾಜ್ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಿಡಿ ಕಾರಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ದಿಗ್ವಿಜಯ್, ರಾಜ್ನಾಥ್ ಸಿಂಗ್ ಮಾಲೇಗಾಂವ್ ಸ್ಫೋಟದ ಆರೋಪಿಗಳಾದ ಲೆ.ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಸಾದ್ವಿ ಪ್ರಗ್ಯಾ ಅವರನ್ನು ಯಾಕೆ ಭೇಟಿ ಮಾಡಲು ಹೋದರು? ಎಂಬುದಕ್ಕೆ ಉತ್ತರಿಸಲಿ ಎಂದಿದ್ದಾರೆ.
ಶಿಂಧೆಯವರ ಹೇಳಿಕೆಯನ್ನು ವಿರೋಧಿಸಿ ಗುರುವಾರ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ನಾಥ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಜೈಪುರದಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ತರಬೇತಿ ಶಿಬಿರಗಳಲ್ಲಿ ಭಯೋತ್ಪಾದನಾ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ಬಗ್ಗೆ ನಮಗೆ ಮಾಹಿತಿ ಲಭಿಸಿದ್ದು, ತನಿಖಾ ವರದಿ ಕೂಡಾ ಸಿಕ್ಕಿದೆ. ಈ ಸಂಘಟನೆಗಳು ನಡೆಸುತ್ತಿರುವ ಕೇಸರಿ ಭಯೋತ್ಪಾದನೆಯ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಏತನ್ಮಧ್ಯೆ ಸಂಜೋತಾ ಬಾಂಬ್ ಸ್ಫೋಟ, ಮೆಕ್ಕಾ ಮಸೀದಿ ಅಥವಾ ಮಾಲೇಗಾಂವ್ ಸ್ಫೋಟವೇ ಇರಲಿ ಅದರಲ್ಲಿ ಈ ಪಕ್ಷಗಳ ಕೈವಾಡವಿದೆ ಎಂದು ಶಿಂಧೆ ಆರೋಪಿಸಿದ್ದರು.