ಐಟಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಗಡ್ಕರಿ
ತನ್ನ ಮೇಲಿರುವ ಆರೋಪಗಳೆಲ್ಲಾ ನಿರಾಧಾರವಾಗಿದ್ದು, ಇದರಲ್ಲಿ ಕಾಂಗ್ರೆಸ್ ನೇತೃತ್ವ ಸರ್ಕಾರದ ಪಿತೂರಿಯಿದೆ. ಆದಾಯ ತೆರಿಗೆ ಇಲಾಖೆ ಯುಪಿಎ ಜತೆ ಸೇರಿಕೊಂಡು ತನ್ನ ಕಂಪನಿಗಳ ಮೇಲೆ...
ನಾಗ್ಪುರ್: ತನ್ನ ಮೇಲಿರುವ ಆರೋಪಗಳೆಲ್ಲಾ ನಿರಾಧಾರವಾಗಿದ್ದು, ಇದರಲ್ಲಿ ಕಾಂಗ್ರೆಸ್ ನೇತೃತ್ವ ಸರ್ಕಾರದ ಪಿತೂರಿಯಿದೆ. ಆದಾಯ ತೆರಿಗೆ ಇಲಾಖೆ ಯುಪಿಎ ಜತೆ ಸೇರಿಕೊಂಡು ತನ್ನ ಕಂಪನಿಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಬಿಜೆಪಿಯ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.
ಗುರುವಾರ ನಾಗ್ಪುರದಲ್ಲಿ ಮಾತನಾಡಿದ ಗಡ್ಕರಿ ತನ್ನ ಕಂಪನಿಗಳ ಮೇಲೆ ಐಟಿ ದಾಳಿ ಮಾಡಿರುವುದು ಕಾಂಗ್ರೆಸ್‌ನ ಸಂಚು ಎಂದು ಹೇಳಿದ್ದಾರೆ.
ಗಡ್ಕರಿಯವರ ಪುರ್ತಿ ಗ್ರೂಪ್ ಕಂಪನಿಯ ಮೇಲೆ ಐಟಿ ದಾಳಿ ನಡೆದಿದ್ದು, ಗಡ್ಕರಿಯವರ ಕಂಪನಿಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಬಗ್ಗೆ ಮಾತನಾಡಿದ ಗಡ್ಕರಿ, ಇದೆಲ್ಲಾ ಒಳ ಸಂಚು ಎಂದು ಹೇಳಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ ಆವಾಗ ಐಟಿ ಅಧಿಕಾರಿಗಳು ಎಲ್ಲಿ ಅಡಗಿಕೊಳ್ಳುತ್ತಾರೆ ಎಂದು ನೋಡುತ್ತೇನೆ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಪಕ್ಷ ಇನ್ನೇನು ಅಧಿಕಾರದಿಂದ ಹೊರ ಬರಲಿದೆ. ಶೀಘ್ರವೇ ಐಟಿ ಇಲಾಖೆಗೆ ನಮ್ಮ ಶಕ್ತಿ ಗೊತ್ತಾಗಲಿದೆ, ಒಮ್ಮೆ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಯಲಿ ಆವಾಗ ನಿಮಗೆ (ಐಟಿ ಇಲಾಖೆಗೆ) ಗೊತ್ತಾಗುತ್ತದೆ. ಆವಾಗ ನಿಮ್ಮನ್ನು ರಕ್ಷಿಸಲು ಅಲ್ಲಿ ಸೋನಿಯಾ ಅಥವಾ ಚಿದಂಬರಂ ಇರುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಆದಾಗ್ಯೂ, ತನ್ನ ರಾಜಕೀಯ ವ್ಯಕ್ತಿತ್ವಕ್ಕೆ ಮಸಿಯೆರೆಚಲು ಕಾಂಗ್ರೆಸ್ ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ನನ್ನ ವಿರುದ್ಧ ವ್ಯಥಾರೋಪಗಳನ್ನು ಮಾಡಲಾಗುತ್ತಿದೆ. ನನಗೆ ಸಂಬಂಧವಿಲ್ಲದೇ ಇರುವ ವಿಷಯಗಳಿಗೆ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನಾನು ಇದರ ವಿರುದ್ಧ ಹೋರಾಡುತ್ತೇನೆ, ಈ ಮೂಲಕ ನಾನು ಆರೋಪ ಮುಕ್ತನಾಗುತ್ತೇನೆ ಎಂದು ಗಡ್ಕರಿ ನುಡಿದಿದ್ದಾರೆ.