ಬಿಎಸ್ವೈ ಬೆಂಬಲಿತ 12 ಶಾಸಕರ ವಿರುದ್ಧ ಸ್ಪೀಕರ್ಗೆ ದೂರು
ಸರ್ಕಾರ ಉರುಳಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ರೂಪಿಸಿದ್ದು...
ಬೆಂಗಳೂರು: ಸರ್ಕಾರ ಉರುಳಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ರೂಪಿಸಿದ್ದು, ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರಲು ಸಿದ್ಧರಾಗಿ, ಕೈಯಲ್ಲಿ ರಾಜಿನಾಮೆ ಹಿಡಿದು ಕುಳಿತಿರುವ 12 ಶಾಸಕರ ವಿರುದ್ಧ ಸ್ಪೀಕರ್ ಕೆ.ಜೆ.ಬೋಪಯ್ಯ ಅವರಿಗೆ ಸೋಮವಾರ ದೂರು ನೀಡಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಂಬಲಿತ ಬಿಜೆಪಿ ಶಾಸಕರಾದ ಬಿ.ಪಿ.ಹರೀಶ್, ಚಂದ್ರಪ್ಪ, ನೆಹರೂ ಓಲೆಕಾರ್ ಹಾಗೂ ಮಾಜಿ ಸಚಿವರಾದ ಶೋಭಾ ಕಾರಂದ್ಲಾಜೆ, ಸಿ.ಎಂ.ಉದಾಸಿ ಸೇರಿದಂತೆ 12 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ನೆಲಮಂಗಲ ಶಾಸಕ ನಾಗರಾಜ್ ಅವರು ವಿಧಾಸಭಾ ಸ್ಪೀಕರ್ ಅವರ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು, ಬೆರೆಯವರ ಒತ್ತಡಕ್ಕೆ ಮಣಿದು ಶಾಸಕರು ರಾಜಿನಾಮೆ ನೀಡಿದ್ದಾರೆ. ಈ ಕುರಿತ ಎಲ್ಲ ದಾಖಲೆಗಳನ್ನು ನಾವು ಸ್ಪೀಕರ್ ಅವರಿಗೆ ಸಲ್ಲಿಸಿದ್ದು, ರಾಜಿನಾಮೆ ಅಂಗೀಕರಿಸದಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ವಿಧಾನ ಪರಿಷತ್ ಸದಸ್ಯರ ವಿರುದ್ಧವೂ ನಾಳೆ ದೂರು ನೀಡುವುದಾಗಿ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.