ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಟ ಕಮಲಹಾಸನ್ ಗೆ ಮತ್ತೆ ಸಂಕಷ್ಟ

ನಟ ಕಮಲಹಾಸನ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿಶ್ವರೂಪಂ ಚಿತ್ರ ಬಿಡುಗಡೆಗೆ ಅನುಮತಿ ನೀಡಿರುವ ಮದ್ರಾಸ್...

Lingaraj Badiger
Updated On : 30 Jan 2013, 3:17 am

ಚೆನ್ನೈ: ನಟ ಕಮಲಹಾಸನ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿಶ್ವರೂಪಂ ಚಿತ್ರ ಬಿಡುಗಡೆಗೆ ಅನುಮತಿ ನೀಡಿರುವ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ತಮಿಳುನಾಡು ಸರ್ಕಾರದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಕಮಲಹಾಸನ್ ಅವರು ಬುಧವಾರ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಮಲಹಾಸನ್ ಅವರು, ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಅಂಶಗಳು ಇಲ್ಲ. ಚಿತ್ರ ಮುಸ್ಲಿಂ ವಿರೋಧಿ ಅಲ್ಲ. ಆದರೂ ಚಿತ್ರದ ಮೇಲಿನ ನಿರ್ಬಂಧಕ್ಕೆ ನಿಜವಾದ ಕಾರಣ ಗೊತ್ತಾಗುತ್ತಿಲ್ಲ ಎಂದರು.

ನನಗೆ ರಾಜಕೀಯ ಮಾಡುವುದರಲ್ಲಿ ಆಸಕ್ತಿ ಇಲ್ಲ. ಆದರೂ ಕೆಲವು ರಾಜಕೀಯ ಪಕ್ಷಗಳು ಜನರ ಭಾವನೆಗಳೊಂದಿಗೆ ಆಟವಾಡುತ್ತಿವೆ ಎಂದು ಪರೋಕ್ಷವಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಕಮಲ್ ವಾಗ್ದಾಳಿ ನಡೆಸಿದರು.

'ವಿಶ್ವರೂಪಂ'ಗಾಗಿ ನಾನು ನನ್ನ ಆಸ್ತಿಯನ್ನೆಲ್ಲಾ ಕಳೆದುಕೊಂಡಿದ್ದೇನೆ. ಆದರೆ ನನಗೆ ನಷ್ಟದ ಬಗ್ಗೆ ಚಿಂತೆ ಇಲ್ಲ. ನನಗೆ ದೇಶ ಮುಖ್ಯ. ನನ್ನ ಚಿತ್ರ ಬಿಡುಗಡೆಗೆ ತಮಿಳುನಾಡು ಒಂದೇ ಅಲ್ಲ ಬೇರೆ ರಾಜ್ಯಗಳು ಇವೆ. ಈ ರಾಜ್ಯದಲ್ಲಿ ಜಾತ್ಯತೀತತೆಗೆ ಬೆಲೆ ಇಲ್ಲ. ಎಲ್ಲಿ ಜ್ಯಾತ್ಯತೀತತೆಗೆ ಬೆಲೆ ಇದೆಯೋ ಅಲ್ಲೇ ಚಿತ್ರ ಬಿಡುಗಡೆ ಮಾಡುತ್ತೇನೆ ಮತ್ತು ಅಲ್ಲೇ ವಾಸಿಸುತ್ತೇನೆ. ಬೇಕಾದರೆ ಈ ಸಂಬಂಧ ನಾನು ದೇಶ ಬಿಡಲು ಸಿದ್ಧ ಎಂದು ಕಮಲ್ ಭಾವನಾತ್ಮಕವಾಗಿ ನುಡಿದರು.

ಇದೇ ವೇಳೆ ಎಂಎಫ್ ಹುಸೇನ್ ಅವರ ಉದಾಹರಣೆ ಕೊಟ್ಟ ಕಮಲ್, ನಾನು ಅವರಂತೆ ದೇಶ ಬಿಟ್ಟು ಹೋದರೆ ನನ್ನ ಪಾಸ್ಪೋರ್ಟ್ ಹಾಗೂ ಅಡ್ರೆಸ್ ಮಾತ್ರ ಬದಲಾಗುತ್ತೆ ಎಂದರು.

ವಿಶ್ವರೂಪಂ ಚಿತ್ರ ಬಿಡುಗಡೆಗೆ ಅನುಮತಿ ನೀಡಿ ನಿನ್ನೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಆದರೆ ಇಂದು ಹೈಕೋರ್ಟ್ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಮಧ್ಯಾಹ್ನ ಅರ್ಜಿ ವಿಚಾರಣೆಗೆ ಬರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement