ಮೋದಿ ಬಗ್ಗೆ ಹೇಳಿಕೆ ನೀಡದಿರಿ: ರಾಜನಾಥ್ ಕಿವಿ ಮಾತು
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ(ಬಿಜೆಪಿ) ಮುಖಂಡರು ಹಾಗೂ ಸದಸ್ಯರು ಯಾವುದೇ ರೀತಿಯ ಹೇಳಿಕೆ ನೀಡಬೇಡಿ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮುಂದಿನ ಚುನಾವಣೆಗೆ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಕೆಲವರು ಅಭಿಪ್ರಾಯ ಪಟ್ಟರೆ ಇನ್ನೂ ಕೆಲವರು ಇತರೆ ನಾಯಕರನ್ನು ಪ್ರಧಾನಿ ಅಭ್ಯರ್ಥಿಗೆ ಸೂಚಿಸುತ್ತಿದ್ದಾರೆ. ಮೋದಿ ವಿರುದ್ಧ ಕೆಲವು ಹೇಳಿಕೆಗಳನ್ನು ಪಕ್ಷದರ ಮುಖಂಡರು ನೀಡುತ್ತಿರುವುದರಿಂದ ರಾಜನಾಥ್ ಸಿಂಗ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕವಾಗಿ ಹೇಳಿಕೆ ನೀಡುವ ಪಕ್ಷದ ನಾಯಕರು ಸ್ಪಲ್ಪ ಎಚ್ಚರ ವಹಿಸಿಬೇಕು. ಪಕ್ಷದ ಯಾವುದೇ ನಾಯಕರ ಬಗ್ಗೆ ಮನಬಂದಂತೆ ಹೇಳಿಕೆ ನೀಡುವುದನ್ನಾ ನಿಲ್ಲಿಸಿ ಎಂದು ಸೂಚಿಸಿದ್ದಾರೆ. ಪ್ರಧಾನಿ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿಯಲ್ಲಿ ಅನೇಕ ಗೊಂದಲಗಳು ಉಂಟಾಗಿದ್ದು, ಈ ಸಂಬಂಧ ನಾಯಕರ ಜೊತೆ ರಾಜನಾಥ್ ಸಿಂಗ್ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಸುಷ್ಮಸ್ವರಾಜ್ ಅವರನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್, ಪಕ್ಷದ ನೂತನ ಪದಾಧಿಕಾರಿಗಳ ನೇಮಕ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪದಾಧಿಕಾರಿಗಳ ಆಯ್ಕೆ ಸಂಬಂಧ ರಾಜಸ್ಥಾನದ ಬಿಜೆಪಿ ನಾಯಕಿ ವಸುಂಧರ ರಾಜೆ ಅವರನ್ನು ರಾಜನಾಥ್ ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ, ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ರಾಜೆ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.