ಒಡೆದ ದುನಿಯಾ: ವಿಜಿಯಿಂದ ಪತ್ನಿ ವಿರುದ್ಧ ದಾಖಲೆ ಬಿಡುಗಡೆ
ವಿಚ್ಛೇದನ ವಿವಾದದಿಂದ ನನಗೆ ತುಂಬಾ ನೋವಾಗಿದೆ. ಇದರಿಂದ ನಾನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ ಎಂದು...
ಬೆಂಗಳೂರು: ವಿಚ್ಛೇದನ ವಿವಾದದಿಂದ ನನಗೆ ತುಂಬಾ ನೋವಾಗಿದೆ. ಇದರಿಂದ ನಾನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ ಎಂದು ನಟ ದುನಿಯಾ ವಿಜಯ್ ಅವರು ಗುರುವಾರ ಹೇಳಿದ್ದಾರೆ.
ವಿಜಯ್ ಹಾಗೂ ಪತ್ನಿ ನಾಗರತ್ನ ಅವರ ವಿಚ್ಛೇದನ ಪ್ರಕರಣ ಸಂಬಂಧಿಸಿದಂತೆ ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಜಿ, ವಿಚ್ಛೇದನಕ್ಕೆ ಕಾರಣವಾದ ಅಂಶಗಳ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ಅವುಗಳನ್ನು ಮಾಧ್ಯಮಕ್ಕೆ ನೀಡುವುದಾಗಿ ತಿಳಿಸಿದರು.
ನಾಗರತ್ನ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ, ಅದಕ್ಕೆ ಅವರು ಉತ್ತರಿಸಲಿ ಎಂದ ವಿಜಿ, ನನ್ನ ಬಗ್ಗೆ ನಿಜವಾಗ್ಲೂ ಪ್ರೀತಿ ಇದ್ದಿದ್ರೆ ದೂರು ಕೊಡ್ತಿದ್ರಾ? ನಿನ್ನ ತಮ್ಮನಿಗೆ ನಾನು ಸಹಾಯ ಮಾಡಿಲ್ವಾ? ನಿಮ್ಮ ತಾಯಿಗೆ ಚಿನ್ನಾಭರಣ ಕೊಡಿಸಿಲ್ವಾ ಎಂದು ಪ್ರಶ್ನಿಸಿದರು. ಅಲ್ಲದೆ ತಮ್ಮ ಪತ್ನಿಗೆ ಕೇಳಿದ ಪ್ರಶ್ರೆಗಳ ಸಿಡಿಯನ್ನು ವಿಜಿ ಬಿಡುಗಡೆ ಮಾಡಿದರು.
ನಾಗರತ್ನಗೆ ನಾನು ಯಾವುದೇ ಅನ್ಯಾಯ ಮಾಡಿಲ್ಲ. ಅವರಿಗೆ ನಾಲ್ಕು ಕೋಟಿ ರುಪಾಯಿ ಬೆಲೆ ಬಾಳುವ ಮನೆ, 20 ಲಕ್ಷ ರುಪಾಯಿ ಒಡವೆ, 40 ಲಕ್ಷ ರುಪಾಯಿ ಎಲ್ಐಸಿ ಪಾಲಿಸಿ ಮಾಡಿಸಿದ್ದೇನೆ. ನಾಗರತ್ನ ಅವರ ತಂಗಿಯ ಮದುವೆ ಮಾಡಿಸಿದ್ದೇನೆ. ಆದರೆ ನನ್ನಿಂದ ದುಡ್ಡು ಕೀಳುವ ಉದ್ದೇಶದಿಂದ ಅವರು ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದರು.
ನಾಗರತ್ನ ಅವರಿಗೆ ವಿಜಿ ತಾವು ಕೊಡಿಸಿದ ಒಡವೆ, ಮನೆ, ಎಲ್‌ಐಸಿ, ಸೀರೆ ಹಾಗೂ ಬ್ಯಾಗ್‌ಗಳ ಒಟ್ಟು ಮೌಲ್ಯವನ್ನು ಒಳಗೊಂಡ ಬಿಲ್‌ಗಳನ್ನು ಮಾಧ್ಯಮಕ್ಕೆ ನೀಡಿದರು.
ಇದೇ ವೇಳೆ ನಾಗರತ್ನ ಅವರ ವಿರುದ್ಧ ಆರೋಪಗಳ ಸುರಿಮಳೆಗೈದ ವಿಜಿ, ನಾಗರತ್ನ ಒಬ್ಬ ಮಾನಸಿಕ ರೋಗಿ, ಅವರು ತನ್ನ ತಂದೆ, ತಾಯಿಗೆ ಯಾವುದೇ ಬೆಲೆ ಕೊಡುತ್ತಿರಲಿಲ್ಲ. ಇದರಿಂದ ನೊಂದು ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದರು.
ತಾಯಿ ನಾರಾಯಣಮ್ಮ, ತಂದೆ ರುದ್ರಪ್ಪ ಹಾಗೂ ಅಕ್ಕನ ಮಗಳು ಉಷಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.