ರೇಲ್ವೆ ಲಂಚ; ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ರೇಲ್ವೆ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ 10 ಮಂದಿ ವಿರುದ್ಧ ಸಿಬಿಐ ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ. ರೇಲ್ವೇ ಮಾಜಿ ಸಚಿವ ಪವನ್ ಕುಮಾರ್...
ನವದೆಹಲಿ: ರೇಲ್ವೆ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ 10 ಮಂದಿ ವಿರುದ್ಧ ಸಿಬಿಐ ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ. ರೇಲ್ವೇ ಮಾಜಿ ಸಚಿವ ಪವನ್ ಕುಮಾರ್ ಬನ್ಸಾಲ್ ಅವರ ಅಳಿಯನ ಹೆಸರು ಆರೋಪಪಟ್ಟಿಯಲ್ಲಿದ್ದು, ಬನ್ಸಾಲ್ ಹೆಸರು ಅದಲಿಲ್ಲ ಎಂದು ಬಲ್ಲಮೂಲಗಳು ಹೇಳಿವೆ.
ರೇಲ್ವೇ ಮಂಡಳಿಯ ಅಮಾನತುಗೊಂಡ ಸದಸ್ಯ ಮಹೇಶ್ ಕುಮಾರ್ ಮತ್ತು ಬನ್ಸಾಲ್‌ರ ಅಳಿಯ ವಿಜಯ್ ಸಿಂಗ್ಲಾ ರು.90 ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದರು. ಈ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಬನ್ಸಾಲ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಪ್ರಸ್ತುತ ಪ್ರಕರಣದ ಬಗ್ಗೆ ಸಿಬಿಐ ಜುಲೈ 3ರೊಳಗೆ ಆರೋಪಪಟ್ಟಿ ಸಲ್ಲಿಸುವುದು ಅನುಮಾನ ಎಂಬ ಮಾತು ಕೇಳಿ ಬಂದಿತ್ತು. ಪ್ರಮುಖ ಆರೋಪಿ ರೇಲ್ವೆ ಮಂಡಳಿ ಸದಸ್ಯ ಮಹೇಶ್ ಕುಮಾರ್ ವಿಚಾರಣೆ ನಡೆಸಲು ಅವಕಾಶ ನೀಡುವಂತೆ ರೇಲ್ವೇ ಸಚಿವಾಲಯದಿಂದ ಸಿಬಿಐ ಅವಕಾಶ ಕೋರಿದ್ದರೂ, ಇದಕ್ಕೆ ಸಚಿವಾಲಯ ಅನುಮತಿ ನೀಡಿರಲಿಲ್ಲ. ಆದ್ದರಿಂದ ನಿಗದಿತ ಸಮಯದಲ್ಲಿ ಆರೋಪಪಟ್ಟಿ ಸಲ್ಲಿಸುವುದು ಅನುಮಾನ ಎಂದೇ ಹೇಳಲಾಗುತ್ತಿತ್ತು. ಏತನ್ಮಧ್ಯೆ ಪ್ರಕರಣ ದಾಖಲಿಸಿ 60 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಹೇಳಿದ್ದರು.
ಇದೀಗ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಂಗ್ಲಾ ಮತ್ತು ಮಹೇಶ್ ಕುಮಾರ್ ಪ್ರಧಾನ ಆರೋಪಿಗಳಾಗಿದ್ದಾರೆ. ಮಾತ್ರವಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ. ಮಹೇಶ್ ಕುಮಾರ್ ಅವರನ್ನು ಮೇ 3ರಂದು ಹಾಗು ಸಿಂಗ್ಲಾ ಅವರನ್ನು ಮೇ.4ರಂದು ಬಂಧಿಸಲಾಗಿತ್ತು.