ಆರೋಪಪಟ್ಟಿಯಲ್ಲಿ ಬನ್ಸಾಲ್ ಹೆಸರು ಕೈ ಬಿಟ್ಟಿರುವುದಕ್ಕೆ ಬಿಜೆಪಿ ಆಕ್ರೋಶ
ರೇಲ್ವೆ ಲಂಚ ಪ್ರಕರಣದಲ್ಲಿ ಮಾಜಿ ರೇಲ್ವೆ ಸಚಿವ ಪಿ.ಕೆ ಬನ್ಸಾಲ್ ಅವರ ಹೆಸರನ್ನು ಆರೋಪಪಟ್ಟಿಗೆ ಸೇರಿಸದೆ ಕ್ಲೀನ್‌ಚಿಟ್ ನೀಡಿದ ಸಿಬಿಐ ...
ನವದೆಹಲಿ: ರೇಲ್ವೆ ಲಂಚ ಪ್ರಕರಣದಲ್ಲಿ ಮಾಜಿ ರೇಲ್ವೆ ಸಚಿವ ಪಿ.ಕೆ ಬನ್ಸಾಲ್ ಅವರ ಹೆಸರನ್ನು ಆರೋಪಪಟ್ಟಿಗೆ ಸೇರಿಸದೆ ಕ್ಲೀನ್‌ಚಿಟ್ ನೀಡಿದ ಸಿಬಿಐ ನಿಲುವಿಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಪ್ರಧಾನಿಯವರನ್ನು ರಕ್ಷಿಸುವ ಸಲುವಾಗಿ ಬನ್ಸಾಲ್ ಹೆಸರನ್ನು ಆರೋಪಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಒಂದು ವೇಳೆ ಬನ್ಸಾಲ್ ಅವರನ್ನು ಈ ಪ್ರಕರಣದಲ್ಲಿ ಸೇರಿಸಿ ಅವರ ಇತರ ಸಂಪರ್ಕಗಳನ್ನು ಕೆದಕಿದರೆ ಇನ್ನೂ ಹಲವು ಮಹನೀಯರು ಈ ಪ್ರಕರಣದಲ್ಲಿ ಪಾಲ್ಗೊಂಡಿರುವುದು ಬಯಲಾಗಬಹುದು. ಆದ್ದರಿಂದಲೇ ಬನ್ಸಾಲ್‌ರನ್ನು ದೂರವಿರಿಸಲಾಗುತ್ತಿದೆ ಎಂದು ಬಿಜೆಪಿ ವಕ್ತಾರ ವಿಜಯ್ ಸೋನ್ಕರ್ ಶಾಸ್ತ್ರಿ ಹೇಳಿದ್ದಾರೆ
ಕಲ್ಲಿದ್ದಲು ಹಂಚಿಕೆ ಪ್ರಕರಣದಂತೆ ಈ ಪ್ರಕರಣದಲ್ಲಿಯೂ ಪ್ರಧಾನಿ ಕಾರ್ಯಾಲಯ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಆರೋಪಿಸಿದೆ.
ಆದ್ದರಿಂದಲೇ ಬನ್ಸಾಲ್ ಅವರಿಗೆ ಕ್ಲೀನ್‌ಚಿಟ್ ನೀಡುವ ಮೂಲಕ ಪ್ರಧಾನಿ ಕಾರ್ಯಾಲಯ ಪ್ರಸ್ತುತ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯವನ್ನು ಮರೆ ಮಾಚಲಾಗುತ್ತಿದೆ ಎಂದು ಶಾಸ್ತ್ರಿ ಹೇಳಿದ್ದಾರೆ.
ರೇಲ್ವೆ ಮಂಡಳಿಯ ಸ್ಥಾನವು ಜತೆ ಕಾರ್ಯದರ್ಶಿಯ ಸ್ಥಾನಕ್ಕೆ ಸಮಾನ ಆಗಿರುವಾಗ ಮಹೇಶ್ ಕುಮಾರ್ ಅವರನ್ನು ನೇಮಕಗೊಳಿಸುವ ಆದೇಶ ಪ್ರಧಾನಿಯವರ ಕಚೇರಿಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಿಂದ ಬಂದಿರುತ್ತದೆ. ಆದ್ದರಿಂದಲೇ ಬನ್ಸಾಲ್ ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಶಾಸ್ತ್ರಿ ಹೇಳಿದ್ದಾರೆ.
ಆದಾಗ್ಯೂ, ಈ ಲಂಚ ಪ್ರಕರಣ ಪ್ರಧಾನಿ ಕಾರ್ಯಾಲಯಕ್ಕೆ ಗೊತ್ತಿದ್ದೇ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.