ಸಾಮಾಜಿಕ ಜಾಲತಾಣಗಳ ಮೂಲಕ 'ಕೈ' ಪ್ರಚಾರ
2014ರ ಸಾರ್ವಜನಿಕ ಚುನಾವಣೆಯ ಪ್ರಚಾರಕ್ಕಾಗಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮೊರೆ ಹೋಗಲಿದೆ. ಕಾಂಗ್ರೆಸ್ ಪಕ್ಷದ ...
ನವದೆಹಲಿ: 2014ರ ಸಾರ್ವಜನಿಕ ಚುನಾವಣೆಯ ಪ್ರಚಾರಕ್ಕಾಗಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮೊರೆ ಹೋಗಲಿದೆ. ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವೀಟರ್, ಬ್ಲಾಗ್‌ಗಳ ಮೂಲಕ ಚುನಾವಣೆ ಪ್ರಚಾರ ನಡೆಸಿ ದೇಶದ ಯುವಕರ ಗಮನ ಸೆಳೆಯಬಯಸಿದ್ದಾರೆ ಎಂದು ಸಂವಹನ ಇಲಾಖೆಯ ನೂತನ ಅಧ್ಯಕ್ಷ ಅಜಯ್ ಮೆಕೇನ್ ಹೇಳಿದ್ದಾರೆ.
127 ವರ್ಷಗಳಷ್ಟು ಪುರಾತನವಾಗಿರುವ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಚಾರವನ್ನು ಕಾಫಿ ಶಾಪ್, ಪಾರ್ಕ್‌ಗಳಲ್ಲಿ ಸೀಮಿತಗೊಳಿಸದೆ ಇನ್ಮುಂದೆ ಯುವಕರ ನೆಚ್ಚಿನ ಜಾಲತಾಣಗಳಲ್ಲಿ ಪ್ರಚಾರ ನಡೆಸಲು ಬಯಸಿದೆ ಎಂದು ಮೆಕೇನ್ ಹೇಳಿದ್ದಾರೆ .
ನಾವು ಸಂವಹನಕ್ಕಾಗಿ ಎಲ್ಲ ರೀತಿಯ ಸಾಧನಗಳನ್ನು ಬಳಸಬೇಕಾಗಿದೆ. ಅದು ಮುದ್ರಣ ಮಾಧ್ಯಮ ಅಥವಾ ಇಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಗಳೇ ಆಗಿರಬಹುದು, ನಾವು ಎಲ್ಲ ರೀತಿಯ ಮಾಧ್ಯಮಗಳನ್ನು ಬಳಸಿಕೊಳ್ಳಬೇಕಾಗಿದೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಹೇಳಿದ್ದಾರೆ.
ಪ್ರಸ್ತುತ ಪಕ್ಷದ ಬಗ್ಗೆ ಹಲವಾರು ಋಣಾತ್ಮಕ ಮಾತುಗಳು ಹೇಳಿಬರುತ್ತಿವೆಯಲ್ಲವೆ? ಎಂದು ಮಾಧ್ಯಮದವರು ಪ್ರಶ್ನಿಸಿದಾಗ ನಮ್ಮ ಪಕ್ಷ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ರಾಹುಲ್‌ಗಾಂಧಿಯವರ ನೇತೃತ್ವದಲ್ಲಿ ಧನಾತ್ಮಕವಾಗಿಯೇ ಮುನ್ನಡೆಯುತ್ತಿದೆ ಎಂದು ಉತ್ತರಿಸಿದ್ದಾರೆ.
ನಾಯಕರಿಗೆ ತಮ್ಮ ಕಾರ್ಯಕರ್ತರ ಜತೆಗೆ ನೇರಾನೇರ ಸಂಪರ್ಕ ಕಲ್ಪಿಸಬೇಕಾಗಿದೆ. ಮಾತ್ರವಲ್ಲ ಸಾರ್ವಜನಿಕ ಚರ್ಚೆಗಳು ನಾಯಕರಿಗೂ ಗೊತ್ತಾಗುವಂತಿರಬೇಕು ಎಂದು ಮೆಕೇನ್ ಅಭಿಪ್ರಾಯ ಪಟ್ಟಿದ್ದಾರೆ.