ಭಾರತೀಯ ವಾಯು ಸೇನೆಯ ನಕಲಿ ಜಾಲತಾಣಗಳ ಬಗ್ಗೆ ಎಚ್ಚರಿಕೆ!
ಉತ್ತರಾಖಂಡದಲ್ಲಿ ಸಂಭವಿಸಿದ ಪ್ರಳಯದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿ, ಬದುಕು ಅಸ್ತವ್ಯಸ್ತವಾಗಿ ಒದ್ದಾಡುತ್ತಿದ್ದರೆ, ಇತ್ತ ಕೆಲವು ಜನರು ...
ನವದೆಹಲಿ: ಉತ್ತರಾಖಂಡದಲ್ಲಿ ಸಂಭವಿಸಿದ ಪ್ರಳಯದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿ, ಬದುಕು ಅಸ್ತವ್ಯಸ್ತವಾಗಿ ಒದ್ದಾಡುತ್ತಿದ್ದರೆ, ಇತ್ತ ಕೆಲವು ಜನರು ದುರಂತದ ಹೆಸರು ಹೇಳಿ ಹಣ ಸಂಪಾದನೆ ಮಾಡುತ್ತಿದ್ದಾರೆ.
ಉತ್ತರಾಖಂಡದಲ್ಲಿನ ಜನರನ್ನು ರಕ್ಷಿಸಿ ಅವರಿಗೆ ನೆರವು ನೀಡುವಲ್ಲಿ ಭಾರತೀಯ ವಾಯುಸೇನೆ ಮಹತ್ತರ ಪಾತ್ರವನ್ನು ವಹಿಸಿರುವುದರ ಬಗ್ಗೆ ನಮಗೆಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಕೆಲವೊಂದು ಜನರು ವಾಯುಸೇನೆಯ ನಕಲಿ ಜಾಲತಾಣಗಳನ್ನು ಸೃಷ್ಟಿಸಿ ಹಣ ದೋಚುತ್ತಿದ್ದಾರೆ ಎಂದು ಭಾರತೀಯ ವಾಯು ಸೇನೆ (ಐಎಎಫ್) ದೆಹಲಿ ಪೊಲೀಸರಿಗೆ ದೂರು ನೀಡಿದೆ.
ಈ ನಕಲಿ ಜಾಲತಾಣಗಳು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್‌ನಲ್ಲಿ ವೆಬ್‌ಪುಟವನ್ನು ರಚಿಸಿ ಅದರಲ್ಲಿ ಉತ್ತರಾಖಂಡದ ಪ್ರಳಯ ಪೀಡಿತರಿಗೆ ಸಹಾಯಧನ ನೀಡುವಂತೆ ಕೋರಿದೆ ಎಂದು ಐಎಎಫ್ ಹೇಳಿದೆ.
ನಕಲಿ ವೆಬ್‌ಪುಟಗಳಲ್ಲಿ ವಾಯಸೇನೆಯ ಲೋಗೋ ಬಳಸಿರುವುದರಿಂದ ಇದು ಅಸಲಿಯಂತೆಯೇ ಕಾಣುತ್ತದೆ. ಈ ವೆಬ್‌ಪುಟದಲ್ಲಿ ಸಹಾಯಧನ ನೀಡಲು ಬ್ಯಾಂಕ್ ಖಾತೆ ಸಂಖ್ಯೆಯನ್ನೂ ನೀಡಲಾಗಿದೆ ವಿಂಗ್ ಕಮಾಂಡರ್ ತೇಜ್‌ವೀರ್ ಸಿಂಗ್ ಹೇಳಿದ್ದಾರೆ.
ಏತನ್ಮಧ್ಯೆ, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ನಕಲಿ ವೆಬ್‌ಸೈಟ್‌ಗಳಲ್ಲಿ ನೀಡಲಾಗಿರುವ ಬ್ಯಾಂಕ್ ಖಾತೆಯ ವಿವರವನ್ನು ವಿಂಗ್ ಕಮಾಂಡರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಫೇಸ್‌ಬುಕ್‌ನಲ್ಲಿರುವ ಎರಡು ನಕಲಿ ಪುಟದ ವಾರೀಸುದಾರ ಒಬ್ಬನೇ ವ್ಯಕ್ತಿ ಆಗಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಜಾಲತಾಣದಲ್ಲಿರುವ ಎರಡೂ ಖಾತೆಗಳು ಆದಿತ್ಯ ಎಂಬ ಹೆಸರಿನಿಂದ ಆರಂಭವಾಗಿರುವುದರಿಂದ ಎರಡೂ ವೆಬ್‌ಪುಟಗಳು ಓರ್ವ ವ್ಯಕ್ತಿಗೆ ಸೇರಿದ್ದವಾಗಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೀಗ ನಕಲಿ ವೆಬ್‌ತಾಣಗಳ ಬಗ್ಗೆ ಐಎಎಫ್ ದೂರು ನೀಡಿರುವುದರಿಂದ ಜನರು ಇಂಥಾ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆಯಿಂದರಬೇಕು ಎಂದು ಪೊಲೀಸರು ಹೇಳಿದ್ದಾರೆ.