ಆರ್ಎಸ್ಎಸ್ ಜೊತೆಗೂಡಿ ಚುನಾವಣಾ ಸಿದ್ಧತೆ: ಅಡ್ವಾಣಿ
ನಾಗಪುರ್: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ(ಆರ್ಎಸ್ಎಸ್) ಜೊತೆಗೂಡಿ ಮುಂಬರುವ ಲೋಕಸಭಾ ಚುನಾವಣೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಶುಕ್ರವಾರ ಹೇಳಿದ್ದಾರೆ.
ಇಂದು ಆರ್ಎಸ್ಎಸ್ನೊಡನೆ ಅಡ್ವಾಣಿಯವರು ಮಾತುಕತೆ ನಡೆಸಿದ್ದು, ಚುನಾವಣೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಯ್ಯಾ ಜಿ ಜೋಶಿ ಮತ್ತು ಮೋಹನ್ ಭಗತ್ ಅವರನ್ನು ಭೇಟಿ ಮಾಡಲು ನಾಗಪುರಕ್ಕೆ ಆಗಮಿಸಿದ್ದು, ಅವರೊಂದಿಗೆ ಚುನಾವಣೆ ಕುರಿತು ಚರ್ಚೆ ನಡೆಸಲಾಗಿದೆ. ಆರ್ಎಸ್ಎಸ್ ಇದ್ದರೆ ಬಿಜೆಪಿ, ಆರ್ಎಸ್ಎಸ್ ಇಲ್ಲವಾದರೆ ಬಿಜೆಪಿ ಇರುವುದಿಲ್ಲ ಎಂದು ಅಡ್ವಾಣಿ ಹೇಳಿದ್ದಾರೆ.
ಮೋದಿ ಅವರಿಗೆ ಬಿಜೆಪಿ ಪ್ರಚಾರ ಸಮಿತಿ ಸಾರಥ್ಯ ವಹಿಸಿದ್ದನ್ನು ಬಹಿರಂಗವಾಗಿ ಪ್ರತಿಭಟಿಸಿ ರಾಜೀನಾಮೆ ನೀಡಿ, ವಾಪಸ್ ಪಡೆದ ಅಡ್ವಾಣಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಳನ್ನು ಕುರಿತು ಚರ್ಚಿಸಲು ಕರೆಲಾಗಿದ್ದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಅವರೊಂದಿಗೆ ಮುಖಾಮುಖಿಯಾಗಿದ್ದರು.
ಇದರ ಬೆನ್ನಲ್ಲೇ ಇಂದು ಆರ್ಎಸ್ಎಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.