ಗ್ಯಾಂಗ್ ರೇಪ್: ತೀರ್ಪು ಕಾಯ್ದಿರಿಸಿದ ಬಾಲಪರಾಧ ಮಂಡಳಿ
ನವದೆಹಲಿ: ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಪರಾಧಿ ವಿರುದ್ಧ ಬಾಲಪರಾಧ ಮಂಡಳಿ ನಡೆಸಿದ ವಿಚಾರಣೆ ಇಂದು ಅಂತ್ಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ.
ಬಾಲಪರಾಧ ಮಂಡಳಿಯ ಮ್ಯಾಜಿಸ್ಟ್ರೇಟ್ ಗೀತಾಂಜಲಿ ಗೋಯಲ್ ಅವರು, ಬಾಲಪರಾಧಿ ವಿರುದ್ಧ ಮಾರ್ಚ್‌ನಲ್ಲಿ ಆರಂಭವಾದ ವಿಚಾರಣೆಯನ್ನು ಇಂದು ಅಂತ್ಯಗೊಳಿಸಿದ್ದು, ಜುಲೈ 11ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದಾರೆ.
23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರು ಆರೋಪಿಗಳಲ್ಲಿ 17 ವರ್ಷದವನು ಒಬ್ಬನಾಗಿದ್ದನು. ಕಾನೂನಿನ ಪ್ರಕಾರ 18 ವರ್ಷಗಳ ಕೆಳಪಟ್ಟವರು ತಪ್ಪು ಮಾಡಿದರೆ ಬಾಲಪರಾಧಿ ಎಂದು ಪರಿಗಣಿಸಲಾಗುತ್ತದೆ. ಇವರ ವಿಚಾರಣೆಯನ್ನು ಬಾಲಪರಾಧ ಮಂಡಳಿಯಲ್ಲಿ ನಡೆಸಲಾಗುತ್ತದೆ.
ಬಾಲಪರಾಧಿ ಈಗ 18 ವರ್ಷ ತುಂಬಿದ್ದು, ಮಂಡಳಿ ಕ್ರಮವೇನು ಎಂಬುದು ಕಾದು ನೋಡಬೇಕಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಆರು ಜನ ದುಷ್ಕರ್ಮಿಗಳು ಚಲಿಸುತ್ತಿದ್ದ ಬಸ್‌ನಲ್ಲಿ 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಸಿಂಗಾಪುರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.