ಜಿಂಬಾಬ್ವೆ ಸರಣಿ: ಧೋನಿಗೆ ವಿಶ್ರಾಂತಿ, ರಸೋಲ್ಗೆ ಸ್ಥಾನ
ವೆಸ್ಟ್ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮಂಡಿಯ ಸ್ನಾಯು ಸೆಳೆತದಿಂದಾಗಿ ಸರಣಿಯಿಂದ ಹೊರಬಂದಿರುವ ಟೀಂ ಇಂಡಿಯಾದ ನಾಯಕ...
ನವದೆಹಲಿ: ವೆಸ್ಟ್ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮಂಡಿಯ ಸ್ನಾಯು ಸೆಳೆತದಿಂದಾಗಿ ಸರಣಿಯಿಂದ ಹೊರಬಂದಿರುವ ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಜಿಂಬಾಬ್ವೆ ಸರಣಿಗೂ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಶುಕ್ರವಾರ ತಿಳಿಸಿದೆ.
ಜಿಂಬಾಬ್ವೆ ಸರಣಿಗೆ ತಂಡದ ಆಯ್ಕೆ ಪ್ರಕಿಯೆ ಸಲುವಾಗಿ ಇಂದು ನಡೆದ ಬಿಸಿಸಿಐನ ಸಭೆಯಲ್ಲಿ, ಜಿಂಬಾಬ್ವೆ ಸರಣಿಗೆ ನಾಯಕ ಧೋನಿಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೆ ಜಮ್ಮು ಕಾಶ್ಮೀರದ ಯುವ ಆಟಗಾರ ಸ್ಪಿನ್ನರ್ ಪರ್ವೇಜ್ ರಸೋಲ್ಗೆ ತಂಡದಲ್ಲಿ ಸ್ಥಾನ ನೀಡಿಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟ್ವೀಟರ್ನಲ್ಲಿ ತಿಳಿಸಿದೆ.
ಇದೇ ವೇಳೆ ತಂಡದ ವೇಗಿಗಳಾದ ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಅವರಿಗೆ ಸಹ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದೆ.
ನಾಯಕ ಧೋನಿ ಅಲಭ್ಯತೆಯಿಂದಾಗಿ ಜಿಂಬಾಬ್ವೆ ಸರಣಿಗೂ ಉಪನಾಯಕ ವಿರಾಟ್ ಕೊಹ್ಲಿ ಅವರೆ ತಂಡದ ಸಾರಥ್ಯ ವಹಿಸಲಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಟೀಂ ಇಂಡಿಯಾ ತೀರಾ ಕಳಪೆ ಪ್ರದರ್ಶನದಿಂದಾಗಿ ಸರಣಿ ಗೆಲ್ಲುವ ಸಾಧ್ಯತೆ ಇಲ್ಲದಾಗಿದೆ.
ಜಿಂಬಾಬ್ವೆ ಸರಣಿಗೆ ಆಯ್ಕೆಯಾದ ಟೀಂ ಇಂಡಿಯಾ ಆಟಗಾರರು:
ವಿರಾಟ್ ಕೊಹ್ಲಿ- (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಅಂಬಾಟಿ ರಾಯುಡು, ಅಜಿಂಕ್ಯಾ ರಹಾನೆ, ರವೀಂದ್ರ ಜಡೇಜಾ, ಅಮಿತ್ ಮಿಶ್ರ, ಪರ್ವೇಜ್ ರಸೋಲ್, ಶಾಮಿ, ವಿನಾಯಕ್, ಉನ್ದಾಕಟ್, ಮೋಹಿತ್ ಆಯ್ಕೆಯಾಗಿದ್ದಾರೆ.