'ಆಹಾರ ಭದ್ರತೆ'ಗೆ ನಮ್ಮ ವಿರೋಧವಿಲ್ಲ: ರಾಜನಾಥ್
ಯುಪಿಎ ಸರ್ಕಾರ ಆಹಾರ ಭದ್ರತಾ ಮಸೂದೆ ಅನುಷ್ಠಾನಕ್ಕೆ ಸುಗ್ರೀವಾಜ್ಞೆ ಮಾರ್ಗ ತುಳಿದಿರುವುದು..
ನಾಗ್ಪುರ್: ಯುಪಿಎ ಸರ್ಕಾರ ಆಹಾರ ಭದ್ರತಾ ಮಸೂದೆ ಅನುಷ್ಠಾನಕ್ಕೆ ಸುಗ್ರೀವಾಜ್ಞೆ ಮಾರ್ಗ ತುಳಿದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ. ಅಲ್ಲದೆ ಸಂಸತ್ತಿನಲ್ಲಿ ಆಹಾರ ಭದ್ರತಾ ಮಸೂದೆಯನ್ನು ತಮ್ಮ ಪಕ್ಷ ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾಗ್ಪುರದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್, ಮುಂಬರುವ ಮುಂಗಾರು ಅಧಿವೇಶನದಲ್ಲಿ ಆಹಾರ ಭದ್ರತಾ ಮಸೂದೆಯನ್ನು ನಾವು ವಿರೋಧಿಸುವುದಿಲ್ಲ. ಆದರೆ ಅದರಲ್ಲಿ ಕೆಲವು ತಿದ್ದುಪಡಿ ತರಬೇಕು ಎಂದು ಒತ್ತಾಯಿಸುತ್ತೇವೆ ಎಂದರು. ಆದರೆ ಯಾವ ತಿದ್ದುಪಡಿ ತರಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ.
2004ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ 100 ದಿನದಲ್ಲಿಯೇ ಆಹಾರ ಭದ್ರತಾ ಮಸೂದೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಇಲ್ಲಿಯವರೆಗೆ ವಿಳಂಬ ಮಾಡಿದ್ದು ಏಕೆ? ಮತ್ತು ಈಗ ತರಾತುರಿಯಲ್ಲಿ ಆಧ್ಯಾದೇಶದ ಮೂಲಕ ಜಾರಿಗೆ ತರುತ್ತಿರುವುದು ಏಕೆ ಎಂದು ಸಿಂಗ್ ಪ್ರಶ್ನಿಸಿದರು.