ಉತ್ತರಾಖಂಡ: ರಕ್ಷಣಾ ಕಾರ್ಯಗಳಿಗೆ ಮಳೆ ಅಡ್ಡಿ
ಉತ್ತರಾಖಂಡದ ಪ್ರಳಯ ಪೀಡಿತ ಪ್ರದೇಶಗಳಾದ ರುದ್ರಪ್ರಯಾಗ್, ಚಮೋಲಿ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆ ಸುರಿದ...
ಡೆಹ್ರಾಡೂನ್: ಉತ್ತರಾಖಂಡದ ಪ್ರಳಯ ಪೀಡಿತ ಪ್ರದೇಶಗಳಾದ ರುದ್ರಪ್ರಯಾಗ್, ಚಮೋಲಿ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆ ಸುರಿದ ಪರಿಣಾಮ ರಕ್ಷಣಾಕಾರ್ಯಗಳಿಗೆ ಅಡ್ಡಿಯುಂಟಾಗಿದೆ.
ಪ್ರಸ್ತುತ ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕ ಆಹಾರ ಸಾಮಾಗ್ರಿಗಳನ್ನು ಸಾಗಿಸಿ ನೆರವು ನೀಡುತ್ತಿದ್ದರೂ, ಮಳೆಯಿಂದಾಗಿ ಹೆಲಿಕಾಪ್ಟರ್ ಹಾರಾಟ ಅಸಾಧ್ಯವಾಗಿದೆ.
ಉತ್ತರಕಾಶಿ ಜಿಲ್ಲೆಯಲ್ಲಿ ಕುಂಭದ್ರೋಣ ಮಳೆಯಾಗಿದ್ದು, ಭಾಗೀರಥಿ ನದಿ ಮೈತುಂಬಿ ಹರಿಯುತ್ತಿದೆ. ಈ ನದಿಯ ದಡದಲ್ಲಿ ವಾಸವಾಗಿರುವ ಜನರನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ.
ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕೇದಾರ್‌ಘಾಟಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ನೆರವು ಸಾಮಾಗ್ರಿಗಳನ್ನು ಸಾಗಿಸಲು ಕಷ್ಟವಾಗುತ್ತಿದೆ ಎಂದು ಜಿಲ್ಲಾ ಮೆಜಿಸ್ಟ್ರೇಟ್ ದಿಲೀಪ್ ಜವಾಲ್ಕರ್ ಹೇಳಿದ್ದಾರೆ.
ಈ ಪ್ರದೇಶಗಳಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದ್ದು, ಅಲಕಾನಂದ ನದಿ ತಟದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.