ಗುದ್ದೋಡು ಪ್ರಕರಣ; ಮಾಹಿತಿ ಪ್ರಕಟಿಸಿದ್ದಕ್ಕಾಗಿ ಸಲ್ಲು ವಿರುದ್ಧ ಕೇಸು
ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ವೆಬ್ಸೈಟ್ನಲ್ಲಿ 2002ರ ಗುದ್ದೋಡು ಪ್ರಕರಣದ ಬಗ್ಗೆ ಮಾಹಿತಿಯನ್ನು ಬಹಿರಂಗ...
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ವೆಬ್ಸೈಟ್ನಲ್ಲಿ 2002ರ ಗುದ್ದೋಡು ಪ್ರಕರಣದ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಿದ್ದಕ್ಕಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲು ವಿರುದ್ಧ ದೂರು ನೀಡಿ ಕೇಸು ದಾಖಲಿಸಿದ್ದಾರೆ.
ಸಲ್ಲು ಇತ್ತೀಚೆಗೆ ಅನಾವರಣಗೊಳಿಸಿದ www.salmankhanfiles.com ಎಂಬ ವೆಬ್ಸೈಟ್ನಲ್ಲಿ ಗುದ್ದೋಡು ಪ್ರಕರಣದ ಮಾಹಿತಿಯನ್ನು ಪೋಸ್ಟ್ ಮಾಡಿದ್ದರು.
ಪ್ರಸ್ತುತ ಪ್ರಕರಣವು ನ್ಯಾಯಲಯದಲ್ಲಿ ಇನ್ನೂ ಇತ್ಯರ್ಥವಾಗದೇ ಉಳಿದಿರುವಾಗ ಅದರ ವಿಚಾರಣೆಯ ಬಗ್ಗೆ ವೆಬ್ಸೈಟ್ನಲ್ಲಿ ಪೋಸ್ಟ್ ಹಾಕಿರುವುದು ತಪ್ಪು. ಇದು ನ್ಯಾಯಾಲಯದ ನಿಯಮವನ್ನು ಉಲ್ಲಂಘಿಸಿದಂತೆ ಎಂದು ಸಾಮಾಜಿಕ ಕಾರ್ಯಕರ್ತ ಹೇಮಂತ್ ಪಾಟಿಲ್ ವಾದಿಸಿದ್ದಾರೆ.
ಸಲ್ಲು ಬಗ್ಗೆ ತಾನು ಬಾಂದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಅಲ್ಲಿ ಪ್ರಕರಣ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ. ಆದ್ದರಿಂದ ತಾನು ಮೆಜಿಸ್ಟ್ರೇಟ್ ಕೋರ್ಟು ಮೆಟ್ಟಲೇರಲು ನಿರ್ಧರಿಸಿರುವುದಾಗಿ ಹೇಮಂತ್ ಹೇಳಿದ್ದಾರೆ.
ಗುದ್ದೋಡು ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಅದರ ವಿಚಾರಣೆಯ ಬಗ್ಗೆ, ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ಸಲ್ಲು ತಮ್ಮ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ್ದು, ಜನರ ಅಭಿಪ್ರಾಯವನ್ನು ಬಯಸಿದ್ದಾರೆ.