ಬೋಧ್‌ಗಯಾ ಸ್ಫೋಟ: ಇನ್ನೊಂದು ಬಾಂಬ್ ಪತ್ತೆ
ಬೋಧ್‌ಗಯಾದಲ್ಲಿರುವ ಮಹಾಬೋಧಿ ದೇಗುಲದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸ್ಫೋಟದ ರುವಾರಿಗಳ ರೇಖಾಚಿತ್ರವನ್ನು ಭಾನುವಾರ ...
ಬೋಧ್‌ಗಯಾ: ಬೋಧ್‌ಗಯಾದಲ್ಲಿರುವ ಮಹಾಬೋಧಿ ದೇಗುಲದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸ್ಫೋಟದ ರುವಾರಿಗಳ ರೇಖಾಚಿತ್ರವನ್ನು ಭಾನುವಾರ ಬಿಡುಗಡೆಗೊಳಿಸಲಾಗಿದೆ. ಏತನ್ಮಧ್ಯೆ, ಬೋಧ್‌ಗಯಾದಲ್ಲಿರುವ ಹೋಟೆಲ್ ಬಳಿಯಲ್ಲಿ ಒಂದು ಬಾಂಬ್ ಪತ್ತೆಯಾಗಿದೆ ಎಂದು ಕೆಲವೊಂದು ಮೂಲಗಳು ವರದಿ ಮಾಡಿವೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಹಾರದ ಡಿಜಿಪಿ ಅಭಯಾನಂದ, ದೇಗುಲಗಳ ಸುತ್ತಲೂ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ ಮತ್ತು ಅಲ್ಲಿ ಎಂದಿನಂತೆ ಪ್ರಾರ್ಥನೆಗಳು ಅಡಚಣೆಯಿಲ್ಲದೆ ನಡೆಯುತ್ತಿವೆ. ಆದರೆ ಈ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ದೇವಾಲಯ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಬೋಧ್‌ಗಯಾದ ಮಹಾಬೋಧಿ ಕಾಂಪ್ಲೆಕ್ಸ್‌ನಲ್ಲಿ 9 ಬಾಂಬ್ ಸ್ಫೋಟಗಳು ಸಂಭವಿಸಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿವೆ. ಬಾಂಬ್ ಸ್ಫೋಟವು ಉಗ್ರರ ಕೃತ್ಯವಾಗಿದೆ ಎಂದು ಗೃಹ ಸಚಿವಾಲಯ ದೃಢೀಕರಿಸಿದೆ.
ಇಲ್ಲಿನ ಯುನೆಸ್ಕೋ ಹೆರಿಟೇಜ್‌ನ್ನು ಮತ್ತು ದೇವಾಲಯಗಳನ್ನು ಗುರಿಯಾಗಿರಿಸಿ ಭಾನುವಾರ ಬೆಳಗ್ಗೆ 5.30 ಮತ್ತು 5.58ರ ಮಧ್ಯೆ ಉಗ್ರರು ಬಾಂಬ್ ದಾಳಿ ನಡೆಸಿದ್ದರು.