ಒಂದೇ ಜಾತಿಯಿಂದ ಯಾರೂ ಬೆಳೆಯಲ್ಲ: ಎಚ್ಡಿಕೆಗೆ ಸಿಎಂ ತಿರುಗೇಟು
ನಾನು ಜಾತಿ ರಾಜಕೀಯ ಮಾಡುತ್ತಿಲ್ಲ. ಜಾತಿ ರಾಜಕೀಯ ಯಾರು ಮಾಡುತ್ತಿದ್ದಾರೆ ಎಂಬುದು..
ಬೆಂಗಳೂರು: ನಾನು ಜಾತಿ ರಾಜಕೀಯ ಮಾಡುತ್ತಿಲ್ಲ. ಜಾತಿ ರಾಜಕೀಯ ಯಾರು ಮಾಡುತ್ತಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿರುವ ವಿಷಯ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೋಮವಾರ ತಿರುಗೇಟು ನೀಡಿದ್ದಾರೆ.
ಒಕ್ಕಲಿಗರಿಂದಲೇ ಸಿದ್ದರಾಮಯ್ಯ ಬೆಳೆದದ್ದು ಎಂಬ ಕುಮಾರಸ್ವಾಮಿ ಹೇಳಿಕೆಗೆ ಇಂದು ಪ್ರತಿಕ್ರಿಸಿದ ಸಿಎಂ, ರಾಜಕಾರಣದಲ್ಲಿ ಒಂದೇ ಜಾತಿಯಿಂದ ಯಾರೂ ಬೆಳೆಯಲು ಸಾಧ್ಯವಿಲ್ಲ. ಅವರು(ಕುಮಾರಸ್ವಾಮಿ) ಬೆಳೆದದ್ದು, ಯಾರಿಂದ?, ಅವರು ಏನು ತಮ್ಮ ಮನೆಯಲ್ಲಿಯೇ ಬೆಳೆದಿದ್ದಾರೆಯೇ ಎಂದು ಪ್ರಶ್ನಿಸಿದರು. ಅಲ್ಲದೆ ಎಲ್ಲರೂ ಜನರಿಂದಲೇ ಬೆಳೆದದ್ದು, ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದು ಸಿಎಂ ಹೇಳಿದರು.
ನಿನ್ನೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರೇ, ಅಧಿಕಾರ ಶಾಶ್ವತವಲ್ಲ. ನೀವು ಈ ಮಟ್ಟಕ್ಕೆ ಬಂದಿದ್ದೇ ಒಕ್ಕಲಿಗರಿಂದ. ಈಗ ಅಧಿಕಾರ ಇದೆ ಎಂದು ಒಕ್ಕಲಿಗರನ್ನು ಕಡೆಗಣಿಸಬೇಡಿ. ಹಾಗೆ ಮಾಡಿದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಂದ ಪರಿಸ್ಥಿತಿ ನಿಮಗೂ ಬರುತ್ತದೆ ಎಂದು ಎಚ್ಚರಿಸಿದ್ದರು.