ಸಿಖ್ ವಿರೋಧಿ ಗಲಭೆ: ಸಿಬಿಐ, ಸಜ್ಜನ್‌ಗೆ ನೋಟಿಸ್
1984ರ ಸಿಖ್ ವಿರೋಧಿ ಗಲಭೆ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಹಾಗೂ ಸಿಬಿಐಗೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್...
ನವದೆಹಲಿ: 1984ರ ಸಿಖ್ ವಿರೋಧಿ ಗಲಭೆ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಹಾಗೂ ಸಿಬಿಐಗೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ಸಜ್ಜನ್ ಕುಮಾರ್ ಖುಲಾಸೆ ಸಂಬಂಧ ಜಗದೀಶ್ ಕೌರ್ ಹಾಗೂ ನಿರ್ಪಿತ್ ಕೌರ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಧೀಶರಾದ ಜಿ.ಎಸ್. ಸಿಸ್ತಾನಿ ಮತ್ತು ಜಿ.ಪಿ. ಮಿತ್ತಲ್ ಅವರನ್ನೊಳಗೊಂಡ ವಿಭಾಗಿಯ ಪೀಠ, ಆಗಸ್ಟ್ 27ರೊಳಗೆ ಪ್ರತಿಕ್ರಿಯಿಸುವಂತೆ ಸಿಬಿಐ ಹಾಗೂ ಸಜ್ಜನ್ ಕುಮಾರ್‌ಗೆ ಸೂಚಿಸಿದೆ.
ಸ್ಥಳೀಯ ನ್ಯಾಯಾಲಯ ಸಿಬಿಐ ನೀಡಿದ್ದ ವರದಿ ಅನ್ವಯ ಏಪ್ರಿಲ್ 30ರಂದು ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತು. ಆ ತೀರ್ಪನ್ನು ಪ್ರಶ್ನಿಸಿ ಜಗದೀಶ್ ಕೌರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಪ್ರಕರಣದಲ್ಲಿ ನೇರ ಸಾಕ್ಷಿಗಳಾಗಿರುವ ಜಗದೀಶ್ ಕೌರ್ ಹಾಗೂ ನಿರ್ಪಿತ್ ಕೌರ್ ಅವರ ಹೇಳಿಕೆಯನ್ನು ಸ್ಥಳೀಯ ನ್ಯಾಯಾಲಯ ನಿರ್ಲಕ್ಷಿಸಿದೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ನ್ಯಾಯಾಲಯಕ್ಕೆ ಸಿಬಿಐ 129 ಪುಟಗಳ ವರದಿ ಸಲ್ಲಿಸಿತ್ತು ಇದೇ ವರದಿ ಆಧಾರದ ಮೇಲೆ ನ್ಯಾಯಾಲಯ ಆರೋಪಿ ಸಜ್ಜನ್ ಕುಮಾರ್ ಅವರನ್ನು ಆರೋಪದಿಂದ ಮುಕ್ತಗೊಳಿಸಿ ತೀರ್ಪು ನೀಡಿತ್ತು. ಈ ಸಂಬಂಧ ನ್ಯಾಯಾಲಕ್ಕೆ ಸಲ್ಲಿಸದ್ದ ವರದಿಯನ್ನು ಆಗಸ್ಟ್ 27ಕ್ಕೆ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಸಿಬಿಐಗೆ ಸೂಚಿಸಿದೆ.
1984 ಸಿಖ್ ವಿರೋಧಿ ದಂಗೆಯಲ್ಲಿ ಜಗದೀಶ್ ಕೌರ್ ಅವರ ಆಪ್ತ ಸಂಬಂಧಿಕರನ್ನು ದೆಹಲಿ ಕಂಟೋನ್ಮೇಂಟ್ ಬಳಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಸಜ್ಜನ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ 127 ಪುಟಗಳ ವರದಿ ನೀಡಿತ್ತು.