ಗುಜರಾತ್ ಸಿಎಂ ಉತ್ತಮ ನಾಯಕ: ಮೋದಿ ಪರ ಬಿಎಸ್‌ವೈ ಬ್ಯಾಟಿಂಗ್
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡಿರುವ ಮಾಜಿ ಮುಖ್ಯಮಂತ್ರಿ..
ಬೆಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಮೋದಿ ಅವರು ಉತ್ತಮ ನಾಯಕ, ಅವರು ಪ್ರಧಾನಿಯಾಗಬೇಕೆಂಬುದು ತಮ್ಮ ಆಶಯ ಎಂದು ಗುರುವಾರ ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ಕುರಿತಂತೆ ಚರ್ಚಿಸಲು ಇಂದು ಕರೆಯಲಾಗಿರುವ ಕೆಜೆಪಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ನರೇಂದ್ರ ಮೋದಿ ಒಬ್ಬ ಉತ್ತಮ ನಾಯಕ. ಅವರು ಪ್ರಧಾನಿಯಾಗುವುದನ್ನು ನಾನಷ್ಟೇ ಅಲ್ಲ. ಈಡೀ ದೇಶದ ಜನತೆ ಬಯಸುತ್ತಿದ್ದಾರೆ. ಶೇ.55ರಿಂದ ಶೇ.60ರಷ್ಟು ಮಂದಿ ಮೋದಿ ಮುಂದಿನ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದರು.
ಇದೇ ವೇಳೆ ತಾವು ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಯಾವ ಪಕ್ಷದೊಂದಿಗೂ ಕೆಜೆಪಿಯನ್ನು ವಿಲೀನ ಮಾಡುವುದಿಲ್ಲ. ಆದರೆ ಲೋಕಸಭೆ ಚುನಾವಣೆ ವೇಳೆ ಯಾವ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ನಿನ್ನೆ ಬಿಜೆಪಿ ಸೇರುವ ವಿಚಾರದಲ್ಲಿ ತಾವು ಯಾರೊಂದಿಗೆ ಬೇಕಾದರೂ ಮಾತುಕತೆ ನಡೆಸಲು ಸಿದ್ಧ ಎನ್ನುವ ಮೂಲಕ ಬಿಜೆಪಿಗೆ ಹತ್ತಿರವಾಗುತ್ತಿರುವುದನ್ನು ಬಹಿರಂಗಪಡಿಸಿದ್ದರು.