ಪ್ರಧಾನಿ ಭೇಟಿಯಾದ ಮುಲಾಯಂ ಸಿಂಗ್
ಯುಪಿಎ ಸರ್ಕಾರದ ಆಹಾರ ಭದ್ರತಾ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್...
ನವದೆಹಲಿ: ಯುಪಿಎ ಸರ್ಕಾರದ ಆಹಾರ ಭದ್ರತಾ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು, ಗುರುವಾರ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
ಯುಪಿಎ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಮುಲಾಯಂ ಅವರು, ಇಂದು ತುರ್ತಾಗಿ ಪ್ರಧಾನಿ ನಿವಾಸದಲ್ಲಿ ಮನಮೋಹನ್ ಸಿಂಗೆ ಅವರನ್ನು ಭೇಟಿಯಾಗಿ ಸುಮಾರು ಅರ್ಧ ಗಂಟೆ ಕಾಲ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಕೂತುಹಲ ಮೂಡಿಸಿದೆ.
ಪ್ರಧಾನಿ ಭೇಟಿಯ ಬಳಿಕ, ಅವರನ್ನು ಭೇಟಿಯಾಗುವ ಉದ್ದೇಶ ಏನಿತ್ತು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಮುಲಾಯಂ ಅವರು, ತಾವು ಕೇವಲ ಚಹಾ ಕುಡಿಯಲು ಬಂದಿರುವುದಾಗಿ ಹೇಳಿದ್ದಾರೆ.
ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಆಹಾರ ಭದ್ರತಾ ಮಸೂದೆ ಜಾರಿಗೆ ತರುತ್ತಿರುವುದು ರಾಜಕೀಯ ದೂರುದ್ದೇಶಕ್ಕಾಗಿ ವಿನಃ ದೇಶದ ಜನರ ಅನುಕೂಲಕ್ಕಲ್ಲ ಎಂದು ಕಳೆದ ವಾರವಷ್ಟೇ ಮುಲಾಯಂ ಸಿಂಗ್ ಕಿಡಿಕಾರಿದ್ದರು.
ಕಳೆದ ಲೋಕಸಭೆ ಚುನಾವಣೆ ಮುನ್ನ ಮತಕ್ಕಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದ್ದ ಕಾಂಗ್ರೆಸ್ ಸರ್ಕಾರ, 2014ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಆಹಾರ ಭದ್ರತಾ ಮಸೂದೆ ಜಾರಿಗೆ ತರುತ್ತಿದೆ ಎಂದು ಮುಲಾಯಂ ಆರೋಪಿಸಿದ್ದರು.