ಬಿಸಿಸಿಐಯಿಂದ ದಕ್ಷಿಣ ಆಫ್ರಿಕಾ ಪ್ರವಾಸ ರದ್ದು?
ನವದೆಹಲಿ: ಐಸಿಸಿಯ ಮಾಜಿ ಸಿಇಒ ಹರೋನ್ ಲಾರ್ಗಟ್ ಅವರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ(ಸಿಎಸ್ಕೆ)ಯಲ್ಲಿ ಉನ್ನತ ಹುದ್ದೆ ನೀಡುವ ಸಿಎಸ್ಕೆ ತೀರ್ಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತೀವ್ರವಾಗಿ ವಿರೋಧಿಸಿದೆ. ಅಲ್ಲದೆ ಲಾರ್ಗಟ್ಗೆ ಸ್ಥಾನ ನೀಡುವುದನ್ನು ವಿರೋಧಿಸಿ ದಕ್ಷಿಣ ಆಫ್ರಿಕಾ ಪ್ರವಾಸ ರದ್ದು ಮಾಡಲು ಮುಂದಾಗಿದೆ.
ಮಂಡಳಿಯಲ್ಲಿ ಹರೋನ್ ಲಾರ್ಗಟ್ ಅವರಿಗೆ ಸ್ಧಾನ ನೀಡದಂತೆ ಬಿಸಿಸಿಐನ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಸಿಎಸ್ಕೆಗೆ ಒತ್ತಾಯಿಸಿದ್ದಾರೆ. ಅಲ್ಲದೆ ಲಾರ್ಗಟ್ ಅವರಿಗೆ ಸ್ಥಾನ ನೀಡಿದರೆ ಮುಂಬರುವ ದಕ್ಷಿಣ ಆಫ್ರಿಕಾ ನಡುವಣ ಪಂದ್ಯಗಳಲ್ಲಿ ಭಾರತ ತಂಡ ಭಾಗವಹಿಸುವುದಿಲ್ಲ ಎಂದು ದಾಲ್ಮಿಯಾ ಎಚ್ಚರಿಸಿರುವುದಾಗಿ ಮೂಲಗಳು ತಿಳಿಸಿವೆ.
ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವಣ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಬದಲಿಸುವಂತೆ ಸಿಎಸ್ಕೆ ಮಂಡಳಿಗೆ ಬಿಸಿಸಿಐ ತಿಳಿಸಿತ್ತು. ಆದರೆ ವೇಳಾಪಟ್ಟಿಯ ಕುರಿತು ಅಂತಿಮ ನಿರ್ಧಾರ ತಿಳಿಸುವ ಮುನ್ನ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದಕ್ಕೆ ಬಿಸಿಸಿಐ ಅಸಮಧಾನ ವ್ಯಕ್ತಪಡಿಸಿದೆ.