ನಟಿ ಶೃತಿ ಆತ್ಮಹತ್ಯೆಗೆ ಯತ್ನ?
ಇತ್ತೀಚೆಗಷ್ಟೆ ಪತ್ರಕರ್ತ ಚಂದ್ರಚೂಡ್ ಅವರೊಂದಿಗೆ ಎರಡನೇ ಮದುವೆಯಾಗಿ ಸುದ್ದಿ ಮಾಡಿದ್ದ...
ಬೆಂಗಳೂರು: ಇತ್ತೀಚೆಗಷ್ಟೆ ಪತ್ರಕರ್ತ ಚಂದ್ರಚೂಡ್ ಅವರೊಂದಿಗೆ ಎರಡನೇ ಮದುವೆಯಾಗಿ ಸುದ್ದಿ ಮಾಡಿದ್ದ ಸ್ಯಾಂಡಲ್ವುಡ್ ನಟಿ ಶೃತಿ ಅವರು ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಶೃತಿ ಅವರ ಎರಡನೆ ವಿವಾಹವೂ ವಿವಾದಕ್ಕಿಡಾದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದ್ದು, ಈಗ ಅವರು ಬಸವೇಶ್ವರ ನಗರದ ಪುಣ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ. ಆದರೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೃತಿ ಅವರಿಗೆ ಫುಡ್ ಪಾಯ್ಸನ್ ಆಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ತೀವ್ರ ಅಸ್ವಸ್ಥರಾಗಿದ್ದ ಶೃತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೃತಿ ಅವರನ್ನು ಪರೀಕ್ಷಿಸಿದ ವೈದ್ಯರು, ಸದ್ಯ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಇನ್ನು ಒಂದು ಗಂಟೆಯೊಳಗೆ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಆದರೆ ಶೃತಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಕಾಮಾಕ್ಷಿಪಾಳ್ಯ ಪೊಲೀಸರು, ಶೃತಿ ಅವರನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ, ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಶಿರಡಿಗೆ ತೆರಳಿದ್ದ ನಾನು ಬರುವಾಗ ರಸ್ತೆ ಬದಿಯಲ್ಲಿ ತಯಾರಿಸಿದ್ದ ಆಹಾರವನ್ನು ಸೇವಿಸಿದ್ದರಿಂದ ಫುಡ್ ಪಾಯ್ಸನ್ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಮೊದಲ ಪತಿ ನಿರ್ದೇಶಕ ಮಹೇಂದರ್ ಅವರಿಗೆ ವಿಚ್ಛೇದನ ನೀಡಿದ್ದ ಶೃತಿ ಅವರು ಪತ್ರಕರ್ತ ಚಂದ್ರಚೂಡ್ ಅವರನ್ನು ಮದುವೆಯಾಗಿದ್ದರು. ಆದರೆ ಚಂದ್ರಚೂಡ್ ಅವರಿಗೆ ಈ ಮೊದಲೆ ಮಂಜುಳ ಎಂಬುವರೊಂದಿಗೆ ಮದುವೆಯಾಗಿತ್ತು. ಮಂಜುಳ ಅವರಿಗೆ ವಿಚ್ಛೇದನ ನೀಡದೆ ಚಂದ್ರಚೂಡ್ ಅವರು ಶೃತಿಯೊಂದಿಗೆ ಎರಡನೇ ಮದುವೆಯಾಗಿದ್ದರು ಎನ್ನಲಾಗಿದೆ.