ಮಠಗಳು ಹಣ ಕೇಳಿಲ್ಲ, ನಾನು ಕೊಟ್ಟಿಲ್ಲ: ಸಿದ್ದು
ನವದೆಹಲಿ: ನೂತನ ಆಯವ್ಯಯಲ್ಲಿ ರಾಜ್ಯದ ಮಠಗಳಿಗೆ ಹಣ ನೀಡದ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಠಗಳು ಹಣ ಕೇಳಿಲ್ಲ, ನಾನು ಕೊಟ್ಟಿಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದರು.
ಇಂದು ನವದೆಹಲಿಯಲ್ಲಿ ನಡೆಯುವ ಕಾಂಗ್ರೆಸ್ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಗೆ ತೆರಳಿರುವ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ರಾಜ್ಯದ ಮಠಮಾನ್ಯಗಳು ಹಣದ ನೆರವು ಕೇಳಿಲ್ಲ, ಹೀಗಾಗಿ ನಾನು ಮಠಗಳಿಗೆ ಹಣ ನೀಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಎಲ್ಲ ವರ್ಗಕ್ಕೂ ಸಮಾನ ಆದ್ಯತೆ ನೀಡಲಾಗಿದ್ದು, ಇದು ಅಹಿಂದ ಬಜೆಟ್ ಅನ್ನೋದು ಸರಿಯಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಜನತೆಗೆ ನಿರಾಸೆಯಾಗುವಂತ ಬಜೆಟ್ ನೀಡಿಲ್ಲ. ಚುನಾವಣೆಗು ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಲಾದ ಸುಮಾರು ಶೇ. 60 ರಷ್ಟು ಭರವಸೆ ಈಡೇರಿಸುವಲ್ಲಿ ತಾವು ಸಫಲರಾಗಿದ್ದೇವೆ. ಅಲ್ಲದೆ ರಾಜ್ಯದ ಎಲ್ಲಾ ವರ್ಗಕ್ಕೂ ಸಮಾನ ಆದ್ಯತೆ ನೀಡಿದ್ದೇನೆ ಎಂದು ಸಿದ್ದು ಹೇಳಿದ್ದಾರೆ.