ಬಿಜೆಪಿಯೊಂದಿಗೆ ಬಿಎಸ್ಆರ್ ಕಾಂಗ್ರೆಸ್ ವಿಲೀನ?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನ..
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿಕೊಳ್ಳುವ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಅನ್ನು ಸಹ ಬಿಜೆಪಿಯೊಂದಿಗೆ ವಿಲೀನಗೊಳಿಸಲು ಸದ್ದಿಲ್ಲದೇ ಸಿದ್ಧತೆ ನಡೆದಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಪ್ರಮುಖರು ಶ್ರೀರಾಮುಲು ಅವರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದು, ತವರು ಪಕ್ಷಕ್ಕೆ ಮರಳಲು ಶ್ರೀರಾಮುಲು ಅವರು ಕೆಲವು ಷರತ್ತುಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಸಂಘ ಪರಿವಾರದ ಹಿನ್ನೆಲೆಯಿರುವ ಇಬ್ಬರು ಶಾಸಕರ ನೇತೃತ್ವದಲ್ಲಿ ಉಭಯ ಪಕ್ಷಗಳ ಪ್ರತಿನಿಧಿಗಳು ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಬಿಜೆಪಿ ಹೈಕಮಾಂಡ್ಗೆ ವಿಲೀನ ಪ್ರಸ್ತಾಪ ರವಾನಿಸಲಾಗಿದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದೇಯಾದರೆ ಶೀಘ್ರದಲ್ಲೇ ಬಿಜೆಪಿಯೊಂದಿಗೆ ಬಿಎಸ್ಆರ್ ವಿಲೀನವಾಗಲಿದೆ.
ಇನ್ನು ಶ್ರೀರಾಮುಲು ಅವರ ಆಪ್ತ ಸ್ನೇಹಿತ ಹಾಗೂ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಚಂಚಲಗೂಡ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಸಹ ಉಭಯ ಪಕ್ಷಗಳ ವಿಲೀನಕ್ಕೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ಶ್ರೀರಾಮುಲು ಬಿಎಸ್ಸಾರ್ ಕಾಂಗ್ರೆಸ್ ಕಟ್ಟಿ ನಿರೀಕ್ಷಿತ ಸಾಧನೆ ಕಾಣುವಲ್ಲಿ ವಿಫಲವಾಗಿದ್ದಾರೆ. ಮತ್ತೊಂದು ವಿಧಾನಸಭೆ ಚುನಾವಣೆ ಎದುರಿಸಲು ಇನ್ನೂ 5 ವರ್ಷಗಳು ಕಾಯಬೇಕು. ಅಷ್ಟು ವರ್ಷಗಳ ಕಾಲ ಏಕಾಂಗಿಯಾಗಿ ಹೋರಾಡುತ್ತಾ, ಪಕ್ಷ ಕಟ್ಟುವುದು ಸುಲಭವಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರ ಪ್ರಾದೇಶಿಕ ಪಕ್ಷಗಳತ್ತ ಒಲವು ತೋರುವುದೂ ಅಷ್ಟು ಸುಲಭದ ಮಾತಲ್ಲ. ಈ ಎಲ್ಲ ಕಾರಣಗಳಿಂದ ಸಹಜವಾಗಿಯೇ ಪರ್ಯಾಯ ದಾರಿ ನೋಡಿಕೊಳ್ಳುವಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಬಿಜೆಪಿ ತಳ್ಳಲ್ಪಟ್ಟಿದ್ದರಿಂದ, ಆ ಪಕ್ಷದ ರಾಜ್ಯ ನಾಯಕರಿಗೂ ಈ ವಿಲೀನ ಅನಿವಾರ್ಯವಾಗಿದೆ.