ಬೋಧಗಯಾ ಸ್ಪೋಟ: ಶಂಕಿತ ಉಗ್ರನ ರೇಖಾಚಿತ್ರ ಬಿಡುಗಡೆ
ಬೋಧಗಯಾದಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ...
ಬೋಧಗಯಾ: ಬೋಧಗಯಾದಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶಂಕಿತ ಉಗ್ರನ ರೇಖಾ ಚಿತ್ರಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಮಹಾಬೋಧಿ ದೇವಾಲಯದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿನ ದೃಶ್ಯಾವಳಿಗಳನ್ನು ಎನ್‌ಐಎ ಪರಿಶೀಲಿಸಿತ್ತು. ಆದರೆ ಚಿತ್ರಗಳು ಸ್ಪಷ್ಟವಾಗಿ ಕಾಣಿಸದ ಕಾರಣ ತನಿಖೆಗೆ ಪೂರಕವಾದ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ ದಾಳಿಯ ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿರುವ ಮುಸುಕುಧಾರಿ ವ್ಯಕ್ತಿಯ ರೇಖಾ ಚಿತ್ರವನ್ನು ಇಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಜುಲೈ 7 ರಂದು ಮುಂಜಾನೆ 3.30 ರಿಂದ 4.30ರಲ್ಲಿ ಮಹಾಬೋಧಿ ದೇವಸ್ಥಾನದ ಬಳಿ ದಾಳಿ ನಡೆದಿತ್ತು. ಆದರೆ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿಗಳಲ್ಲಿ ಉಗ್ರರ ಚಿತ್ರಣಗಳು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ಘಟನೆಯ ಪ್ರತ್ಯಕ್ಷಗಳ ಹೇಳಿಕೆ ಆಧಾರದ ಮೇಲೆ ಎನ್‌ಐಎ ಉಗ್ರರ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದೆ.
ಸ್ಪೋಟಕ್ಕೆ ಸಂಬಂಧಿಸಿದಂತೆ, ಮೂವರು ಪ್ರತ್ಯಕ್ಷದರ್ಶಿಗಳಿಂದ ಎನ್‌ಐಎ ಮಾಹಿತಿ ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಮಾಹಿತಿ ಕಲೆ ಹಾಕುವ ಸಲುವಾಗಿ ಪ್ರತ್ಯಕ್ಷದರ್ಶಿಗಳ ಹೆಸರನ್ನು ಎನ್‌ಐಎ ಗುಪ್ತವಾಗಿರಿಸಿದೆ. ಇಬ್ಬರು ಪ್ರತ್ಯಕ್ಷದರ್ಶಿಗಳು ವಿದೇಶಿ ಮೂಲದವರಾಗಿದ್ದು, ಮತ್ತೊಬ್ಬ ಸ್ಥಳೀಯ ಮೂಲದವರಾಗಿದ್ದಾರೆ.
ಸ್ಫೋಟಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದವರಿಗೆ 6 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಈಗಾಗಲೇ ಘೋಷಿಸಿದೆ.
ಬೋಧಗಯಾದಲ್ಲಿರು ಪ್ರಸಿದ್ಧ ಬುದ್ಧನ ದೇವಾಲಯದ ಮೇಲೆ ಜುಲೈ 7 ರಂದು ಉಗ್ರರು ಸರಣಿ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಗಂಭೀರವಾಗಿ ಗಾಯಗೊಂಡಿದ್ದರು.