ಸಿಬಿಐಗೆ ಸ್ವಾಯತ್ತೆ: ಸುಪ್ರೀಂಗೆ ಅಫಿಡವಿಟ್ ಸಲ್ಲಿಕೆ
ನವದೆಹಲಿ: ಸಿಬಿಐಗೆ ಸ್ವಾಯತ್ತೆ ನೀಡುವ ಹಾಗೂ ರಾಜಕೀಯದಿಂದ ಮುಕ್ತಗೊಳಿಸುವ ಕೇಂದ್ರ ಸರ್ಕಾರದ ನಿಲುವಿಗೆ ಸಿಬಿಐ ತನ್ನ ಸಮ್ಮತಿ ಸೂಚಿಸಿದೆ.
ಇಂದು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ ಸಿಬಿಐ, ಮುಖ್ಯಸ್ಥರ ಆಯ್ಕೆ ಸಂಬಂಧ ಕೇಂದ್ರ ಸರ್ಕಾರ ನೀಡಿರುವ ಸಲಹೆಯನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದೆ. ಸಿಬಿಐ ಮುಖ್ಯಸ್ಥರ ಆಯ್ಕೆಯನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಸಲಹೆ ನೀಡಿತ್ತು.
ಸಿಬಿಐ ಮುಖ್ಯಸ್ಥರಾಗಿ ಆಯ್ಕೆಯಾಗುವವರಿಗೆ ಭ್ರಷ್ಟಾಚಾರ ಪ್ರಕರಣಗ ತನಿಖೆ ಮಾಡುವ ಅನುಭವವಿರಬೇಕು. ಅಂತಹವರನ್ನು ಸಿಬಿಐ ಅಧ್ಯಕ್ಷರಾನ್ನಾಗಿ ಆಯ್ಕೆ ಮಾಡುವಂತೆ ಸಿಬಿಐ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರ ಸಿಬಿಐ ಅಧ್ಯಕ್ಷರಿಗೆ ನೀಡಿರುವ 2 ವರ್ಷದ ಅಧಿಕಾರಾವಧಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 2 ವರ್ಷದ ಅವಧಿಯನ್ನು 3 ವರ್ಷಕ್ಕೆ ಏರಿಸುವಂತೆ ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಸಿಬಿಐ ತಿಳಿಸಿದೆ.
ಸಿಬಿಐ ತಾನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹಣಕಾಸು ಮತ್ತು ಆಡಳಿತಾತ್ಮಕ ಅಧಿಕಾರವನ್ನು ಕೋರಿದೆ. ಸಿಬಿಐ ಸಲ್ಲಿಸಿರುವ ಅಫಿಡವಿಟ್ ಅನ್ನು ಬುಧವಾರ ಪರಿಶೀಲಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.