ಆ.4ಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆ
ರಾಜಿನಾಮೆ, ನಿಧನ ಸಹಿತ ವಿವಿಧ ಕಾರಣಕ್ಕೆ ತೆರವಾಗಿರುವ 489 ಗ್ರಾಮ ಪಂಚಾಯ್ತಿಗಳ 560 ಸ್ಥಾನಗಳಿಗೆ..
ಬೆಂಗಳೂರು: ರಾಜಿನಾಮೆ, ನಿಧನ ಸಹಿತ ವಿವಿಧ ಕಾರಣಕ್ಕೆ ತೆರವಾಗಿರುವ 489 ಗ್ರಾಮ ಪಂಚಾಯ್ತಿಗಳ 560 ಸ್ಥಾನಗಳಿಗೆ ನಡೆಯಬೇಕಾಗಿದ್ದ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್ ಮಾಡಿದ್ದು, ಆಗಸ್ಟ್ 4ರಂದು ಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವಂತೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆಗೆ ಜುಲೈ 24 ಕಡೆಯ ದಿನವಾಗಿದೆ. ಇನ್ನು ಜುಲೈ 26ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜು.27 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ.
ಆ.4 ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಆ.7ರಂದು ಆಯಾ ತಾಲೂಕು ಕೇಂದ್ರದಲ್ಲಿ ಮತಗಳ ಎಣಿಕೆ ನಡೆಸಿದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದು ಮೊದಲ ಉಪ ಚುನಾವಣೆಯಾಗಿದ್ದು, ಇದನ್ನು ಕಾಂಗ್ರೆಸ್ ಹೇಗೆ ಎದುರಿಸಲಿದೆ ಎಂಬುದು ಕಾದು ನೋಡಬೇಕಿದೆ.