ಕಲ್ಲಿದ್ದಲು ಮಿಥೇನ್ ಯೋಜನೆಗೆ ಜಯಾ ತಡೆಯಾಜ್ಞೆ
ಚೆನ್ನೈ: ಬಹುಕೋಟಿ ಕಲ್ಲಿದ್ದಲು ಪದರದ ಮಿಥೇನ್ ಯೋಜನೆಯನ್ನು ತಡೆಯಿಡಿಯುವಂತೆ ಗ್ರೇಟ್ ಈಸ್ಟ್ರನ್ ಎನರ್ಜಿ ಸಂಸ್ಧೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬುಧವಾರ ಆದೇಶಿಸಿದ್ದಾರೆ.
ತಮಿಳುನಾಡಿನ ಡೆಲ್ಟಾ ಜಿಲ್ಲೆಯಲ್ಲಿ ಕಲ್ಲಿದ್ದಲು ಪದರದ ಮಿಥೇನ್ ಯೋಜನೆಯ ಕಾರ್ಯ ನಡೆಯುತ್ತಿದ್ದು, ಈ ಯೋಜನೆ ಕೃಷಿ ಕಾರ್ಯಗಳ ಮೇಲೆ ಪರಿಣಾಮ ಬೀರಲಿದೆ ರೈತರು ವಿರೋಧಿಸಿದ್ದರಿಂದ ಜಯಾಲಲಿತಾ ಅವರು ಯೋಜನೆಗೆ ತಡೆ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ತಜ್ಞರ ಸಮಿತಿಯೊಂದನ್ನು ರಚಿಸಿ, ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಸಮಿತಿಯಲ್ಲಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ, ತಮಿಳುನಾಡು ಕೈಗಾರಿಗಾ ಅಭಿವೃದ್ಧಿ ಕಾರ್ಪೋರೇಷನ್, ಅಣ್ಣ ಯೂನಿರ್ವಸಿಟಿ ಹಾಗೂ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಪ್ರಮುಖರು ಇರುತ್ತಾರೆ. ಈ ಸಮಿತಿಯೂ ತನ್ನ ಸಮೀಕ್ಷೆಯ ವರದಿಯನ್ನು ಸಲ್ಲಿಸುವವರೆಗೂ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಕೈಗೊಳ್ಳದಂತೆ ಈಸ್ಟ್ರನ್ ಸಂಸ್ಥೆಗೆ ತಮಿಳುನಾಡು ಸಿಎಂ ಆದೇಶಿಸಿದ್ದಾರೆ.
ಕಲ್ಲಿದ್ದಲು ಪದರದ ಮಿಥೇನ್ ಯೋಜನೆಗೆ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ದೊರಕಿದೆ. ಆದರೆ ಯೋಜನೆಗೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ(ಟಿಎನ್‌ಪಿಸಿಬಿ) ಸಹ ಅನುಮತಿ ನೀಡಬೇಕು. ಆದರೆ ಟಿಎನ್‌ಪಿಸಿಬಿ ಇನ್ನು ಅನುಮತಿ ನೀಡದ ಹಿನ್ನೆಲೆಯಲ್ಲಿ ಯೋಜನೆಯನ್ನು ತಡೆಯಿಡಿಯುವಂತೆ ಕಂಪನಿಗೆ ಆದೇಶಿಸಲಾಗಿದೆ ಎಂದು ಜಯಲಲಿತಾ ತಿಳಿಸಿದ್ದಾರೆ.