ಕೇಂದ್ರದೊಂದಿಗೆ ಮಾಹಿತಿ ಹಂಚಿಕೊಳ್ಳಬೇಡಿ ಸಿಬಿಐಗೆ ಸುಪ್ರೀಂ ಸೂಚನೆ
ನವದೆಹಲಿ: ಕೇಂದ್ರದೊಂದಿಗೆ ತನಿಖಾ ವರದಿಯ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ಇಂದು ಕಲ್ಲಿದ್ದಲು ಹಗರಣದ ತನಿಖೆಯ ಸ್ಥಿತಿಗತಿ ವರದಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ತನಿಖೆಯಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದರೆ ಅದನ್ನು ಕೋರ್ಟ್ ಗಮನಕ್ಕೆ ತನ್ನಿ ಮತ್ತು ತನಿಖೆಯ ವರದಿಯ ಮಾಹಿತಿಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಡಿ ಎಂದು ಸಿಬಿಐಗೆ ಸೂಚಿಸಿದೆ.
ಕೇಂದ್ರ ಸರ್ಕಾರದೊಂದಿಗೆ ತನಿಖಾ ವರದಿಯನ್ನು ಹಂಚಿಕೊಳ್ಳುವುದರಿಂದ ಪ್ರಕರಣದ ಪ್ರಮುಖ ಆರೋಪಿಗಳು ತಮ್ಮ ಬಾಹ್ಯ ಪ್ರಭಾವ ಬಳಸಿ ತನಿಖೆಗೆ ಅಡ್ಡಿ ಉಂಟು ಮಾಡಬಲ್ಲ ಸಾಧ್ಯತೆಗಳಿವೆ. ಹೀಗಾಗಿ ಕೇಂದ್ರದೊಂದಿಗೆ ವ್ಯವಹರಿಸದಂತೆ ಕೋರ್ಟ್ ಹೇಳಿದೆ. ಅಲ್ಲದೆ ಹಗರಣದ ತನಿಖೆ ನಡೆಸಲು ಸಿಬಿಐ ಮುಕ್ತವಾಗಿದೆ. ಹೀಗಾಗಿ ತನಿಖೆಗೆ ಯಾರಾದರು ಅಡ್ಡಿ ಪಡಿಸಿದರೆ ಕೋರ್ಟ್ ಗಮನಕ್ಕೆ ತರುವಂತೆ ಸೂಚಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರದೊಂದಿಗೆ ತನಿಖಾ ವರದಿಯನ್ನು ಸಿಬಿಐ ಹಂಚಿಕೊಂಡಿತ್ತು. ಸರ್ಕಾರ ಕೆಲವು ಪ್ರಮುಖ ಅಂಶಗಳನ್ನು ತಿರುಚಿತ್ತು. ಈ ಸಂಬಂಧ ಸಿಬಿಐ ಸುಪ್ರೀಂ ಕೋರ್ಟ್ ಪ್ರಮಾಣ ಪತ್ರ ಸಹ ಸಲ್ಲಿಸಿತ್ತು.
ಪ್ರಸ್ತುತ ಕಲ್ಲಿದ್ದಲು ಹಗಣರದ ತನಿಖೆಯನ್ನು 33 ಅಧಿಕಾರಿಗಳು ತಂಡ ನಡೆಸುತ್ತಿದೆ. ತನಿಖೆಗೆಯನ್ನು ಮತ್ತಷ್ಟು ವಿಸ್ತರಿಸಬೇಕಾಗಿರುವುದರಿಂದ ಹೆಚ್ಚುವರಿ ತನಿಖಾ ಅಧಿಕಾರಿಗಳ ಸೇರ್ಪಡೆಗೆ ಅವಕಾಶ ನೀಡುವಂತೆ, ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ತನಿಖೆಗೆ ಅಗತ್ಯವಾದರೆ ಹೆಚ್ಚುವರಿ ತನಿಖಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಸೂಚಿಸಿದೆ.