ಬಿಸಿಯೂಟ ದುರಂತ: ಮೃತ ಮಕ್ಕಳ ಸಂಖ್ಯೆ 21ಕ್ಕೇರಿಕೆ
ನಿನ್ನೆ ಬಿಹಾರದ ಸಾರನ್ ಜಿಲ್ಲೆಯ ಛಪ್ರಾದ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವನೆಯಿಂದ ಮೃತಪಟ್ಟ ಮಕ್ಕಳ..
ಪಾಟ್ನಾ: ನಿನ್ನೆ ಬಿಹಾರದ ಸಾರನ್ ಜಿಲ್ಲೆಯ ಛಪ್ರಾದ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವನೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ ಬುಧವಾರ 21ಕ್ಕೆ ಏರಿದೆ. ಅಲ್ಲದೆ ಬಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಮಕ್ಕಳ ಸಾವಿನ ಸಂಖ್ಯೆ 21ಕ್ಕೆ ಏರಿರುವುದನ್ನು ಖಚಿತ ಪಡಿಸಿರುವ ಬಿಹಾರ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮರಜೀತ್ ಸಿಂಗ್ ಅವರು, ಕೀಟನಾಶಕಗಳ ಜಾಡಿನಿಂದ ಆಹಾರ ಪದಾರ್ಥಗಳಲ್ಲಿ ಉಟಾಂದ ಪಾಸ್ಪರಸ್ ಮಕ್ಕಳ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಅಸ್ವಸ್ಥಗೊಂಡ ಮಕ್ಕಳನ್ನು ಪಾಟ್ನಾದ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ 10 ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನದ ಊಟಕ್ಕೆ 'ಕಿಚಡಿ'ಯನ್ನು ವಿದ್ಯಾರ್ಥಿಗಳು ಸೇವಿಸಿದ್ದರು. ಅದನ್ನು ಸೇವಿಸಿದ ತಕ್ಷಣ ಅವರು ಅಸ್ವಸ್ಥರಾದರು. ಸುದ್ದಿ ತಿಳಿದ ತಕ್ಷಣ ಶಾಲೆಗೆ ಧಾವಿಸಿದ ಸ್ಥಳೀಯರು ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದು, ಇಂದು ಸಹ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಸಿಎಂ ನಿತೀಶ್ ಕುಮಾರ್ ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ.